ಬೆಂಗಳೂರು: ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕೆ ದತ್ತು ಮಕ್ಕಳು ಅರ್ಹರು ಎಂದು ಹೈಕೋರ್ಟ ಅಭಿಪ್ರಾಯ ಪಟ್ಟಿದೆ.
ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಲ್ಲಿ ಸ್ವಂತ ಮಕ್ಕಳು ಮತ್ತು ದತ್ತು ಮಕ್ಕಳು ಎಂಬುದಾಗಿ ತಾರತಮ್ಯ ಮಾಡಿದರೆ ದತ್ತು ಸ್ವೀಕಾರದ ಮೂಲ ಉದ್ದೇಶ ಈಡೇರುವುದಿಲ್ಲ ಎಂದು ತಿಳಿಸಿದೆ.
ದತ್ತು ಪುತ್ರನಿಗೆ ಅನುಕಂಪದ ಆಧಾರದ ಉದ್ಯೋಗ ಲಭ್ಯವಾಗುವುದಿಲ್ಲ ಎಂದು ಏಕ ಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಗಿರೀಶ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ವಿಭಾಗಿಯ ಪೀಠ, ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯುವ ಸಂದರ್ಭದಲ್ಲಿ ದತ್ತು ಮಕ್ಕಳು ಮತ್ತು ಸ್ವಂತ ಮಕ್ಕಳು ಎಂಬ ವ್ಯತ್ಯಾಸವನ್ನು ನೋಡಿದಲ್ಲಿ ದತ್ತು ತೆಗೆದುಕೊಳ್ಳುವ ಉದ್ದೇಶ ಈಡೇರುವುದಿಲ್ಲ ಎಂದು ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಸರ್ಕಾರ ದತ್ತು ಮಕ್ಕಳು ಮತ್ತು ಸ್ವಂತ ಮಕ್ಕಳ ನಡುವಿನ ವ್ಯತ್ಯಾಸವನ್ನು 2021ರ ಏಪ್ರಿಲ್ ತಿಂಗಳಲ್ಲಿ ತೆಗೆದು ಹಾಕಿದೆ. ಈ ಬಗ್ಗೆ ಹೊಸದಾಗಿ ತಿದ್ದು ಪಡಿ ಮಾಡಲಾಗಿದೆ.
ಈ ಅಂಶ ಏಕ ಸದಸ್ಯ ಪೀಠ ಗಮನಿಸಿಲ್ಲ ಎಂಬುದಾಗಿ ವಿವರಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಸರ್ಕಾರದ ಪರ ವಕೀಲರು, 2021ರಲ್ಲಿ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಆದರೆ ಗಿರೀಶ ಅವರು 2018ರಲ್ಲಿ ಮನವಿ ಮಾಡಿದ್ದಾರೆ. ಹೀಗಾಗಿ ಅವರಿಗೆ ಈ ನಿಯಮದ ಲಾಭ ಪಡೆಯಲು ಅವಕಾಶವಿಲ್ಲ ಎಂದು ವಿವರಿಸಿದರು.
ಸರ್ಕಾರದ ವಾದ ತಳ್ಳಿ ಹಾಕಿದ ನ್ಯಾಯಪೀಠ, ಸೇವೆಯಲ್ಲಿರುವ ವ್ಯಕ್ತಿ ಮೃತಪಟ್ಟಾಗ ಆತನ ಕುಟುಂಬ ಎದುರಿಸುತ್ತಿರುವ ಆರ್ಥಿಕ ಸಮಸ್ಯೆ ಆಧಾರದಲ್ಲಿ ಅನುಕಂಪದ ನೇಮಕಾತಿ ಇರಲಿದೆ. ಜತೆಗೆ, ಈ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿಯ ಹೆಂಡತಿ ಮತ್ತು ಮಗ ಮತ್ತು ಬುದ್ಧಿಮಾಂದ್ಯ ಹಾಗೂ ದೈಹಿಕ ವಿಕಲಾಂಗ ಮಗಳನ್ನು ಬಿಟ್ಟು ಹೋಗಿದ್ದಾರೆ. ಮಗ ಈಗಾಗಲೇ ಮೃತ ಪಟ್ಟಿದ್ದು, ಮೃತರ ಮಗಳು ಅಂಗವೈಕಲ್ಯಕ್ಕೆ ಒಳಗಾಗಿದ್ದು, ಮಾನಸಿಕವಾಗಿ ಬುದ್ಧಿಮಾಂದ್ಯರಾಗಿದ್ದಾರೆ. ಆದ್ದರಿಂದ ಕುಟುಂಬದ ಪೋಷಣೆ ಮಾಡಬೇಕಾಗಿದ್ದು, ದತ್ತು ಪುತ್ರನಿಗೆ ಅನುಕಂಪದ ಉದ್ಯೋಗ ನೀಡಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.