ಬೆಳಗಾವಿ : ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸುತ್ತಿದಂತೆ ಜಿಲ್ಲೆಯಲ್ಲಿ ಭಿನ್ನಮತ ಉಂಟಾಗಿದೆ. ರಾಮದುರ್ಗ ಕ್ಷೇತ್ರಕ್ಕೆ ಮಾಜಿ ಶಾಸಕ ಅಶೋಕ ಪಟ್ಟಣ ಅವರಿಗೆ ಟಿಕೆಟ್ ನೀಡಿದಕ್ಕೆ ಅಸಮಾಧಾನಗೊಂಡಿರುವ ಆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅರ್ಜುನ ಗುಡ್ಡದ ಅವರು ತಾವು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿದ್ದಾರೆ.
ರಾಮದುರ್ಗ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಸೇರಿದಂತೆ ಸಾಮಾನ್ಯವಾಗಿ ಎಲ್ಲ ಪಕ್ಷಗಳೂ ನಂತರದ ಚುನಾವಣೆಗೆ ಪರಿಗಣಿಸುವದಿಲ್ಲ. ತಾವೂ ಸೇರಿದಂತೆ ಐದು ಸ್ಪರ್ಧಾಕಾಂಕ್ಷಿಗಳು ಪಟ್ಟಣ ಹೊರತು ಪಡಿಸಿ ತಮ್ಮೊಳಗೊಬ್ಬರಿಗೆ ಟಿಕೆಟ್ ನೀಡಿದರೆ ಒಮ್ಮತದಿಂದ ಅವರ ಗೆಲುವಿಗೆ ಶ್ರಮಿಸುವದಾಗಿ ತಿಳಿಸಿದ್ದೆವು. ಆದರೆ ಪಕ್ಷ ತಮ್ಮ ಬೇಡಿಕೆಗೆ ಗಮನ ನೀಡದೇ ಪಟ್ಟಣ ಅವರನ್ನು ಆಯ್ಕೆ ಮಾಡಿದೆ ಎಂದರು.
ಕಳೆದ ಚುನಾವಣೆಯಲ್ಲಿ ಎಲ್ಲರೂ ಅವರನ್ನು ಗೆಲ್ಲಿಸಲು ಪ್ರಯತ್ನಿಸಿದ್ದೇವು. ಆದರೆ ತಮ್ಮ ಸೋಲಿಗೆ ನಾವು ಐದು ಜನ ಕಾರಣವೆಂದು ಅರೋಪಿಸುತ್ತಿದ್ದಾರೆ. ಹಾಗಾಗಿ ತಾವು ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಗುಡ್ಡದ ತಿಳಿಸಿದರು.
ಪಟ್ಟಣ ಅವರು ನಮ್ಮ ಮೇಲೆ ಇಲ್ಲಿಸಲ್ಲದ ಆರೋಪ ಮಾಡಿ, ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾರೆ. ನಾವು ಟಿಕೆಟ್ ಕೇಳಿದ ಕಾರಣ ಅವರು ನಮ್ಮ ಮೇಲೆ ತೇಜೋವಧೆ ಮಾಡುತ್ತಿದ್ದಾರೆ. ಅಶೋಕ ಪಟ್ಟಣ ಈ ಕೂಡಲೆ ಕ್ಷಮೆ ಕೇಳಬೇಕು. ಅಶೋಕ ಪಟ್ಟಣಗೆ ಯಾವ ಆಧಾರದ ಮೇಲೆ ಟಿಕೆಟ್ ಕೊಟ್ಟಿದ್ದಾರೆ ಗೊತ್ತಿಲ್ಲ ಎಂದರು.
“ಪಟ್ಟಣ ಕಾಂಗ್ರೆಸ್ ಆಭ್ಯರ್ಥಿ ಆದರೆ ನಾನು ಬಂಡಾಯ ಅಭ್ಯರ್ಥಿ ಆಗ್ತೇನೆ, ಗೆಲ್ಲುವ ಮೂಲಕ ಅಶೋಕ ಪಟ್ಟಣಗೆ ತಕ್ಕ ಪಾಠ ಕಲಿಸುತ್ತೇವೆ. ರಾಮದುರ್ಗನಿಂದ ಐದು ಜನ ಟಿಕೆಟ್ ಕೇಳಿದ್ದೇವು ಅವರೆಲ್ಲ ನನಗೆ ಬೆಂಬಲ ನೀಡುವ ಭರವಸೆ ಇದೆ, ಬಹಿರಂಗವಾಗಿ ಇಲ್ಲದಿದ್ದರೂ ನನಗೆ ಅವರೆಲ್ಲ ಬೆಂಬಲ ನೀಡುತ್ತಾರೆ ಎಂದರು.
2018 ರ ಚುನಾವಣೆಯಲ್ಲಿ ಪಟ್ಟಣ ಸೋಲಿಗೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವದು ಮತ್ತು ನಮ್ಮನ್ನು ಕಡೆಗಣಿಸಿದ್ದು ಕಾರಣ. ಅಶೋಕ ಪಟ್ಟಣ ಸಿದ್ದರಾಮಯ್ಯ ಅವರನ್ನು ಬ್ಲ್ಯಾಕಮೇಲ್ ಮಾಡಿ ಟಿಕೇಟ್ ಪಡೆದುಕೊಳ್ಳುತ್ತಾರೆ ಎಂದು ಅರ್ಜುನ ಗುಡ್ಡದ ಆರೋಪ ಮಾಡಿದ್ದಾರೆ.