ವಿಜಯಪುರ: ವಿಮಾನ ನಿಲ್ದಾಣದ ಕಾಮಗಾರಿ ಭರದಿಂದ ಸಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡು ವಿಜಯಪುರ ಜನತೆ ವಿಮಾನದಲ್ಲಿ ಸಂಚರಿಸುವ ಅವಕಾಶ ಲಭ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಹೊರವಲಯದ ಬುರಾಣಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಬುಧವಾರ ನಡೆಸಿದ ಬಳಿಕ ಮಾತನಾಡಿದ ಅವರು, ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್ 72 ದಿಂದ ಏರ್‌ಬಸ್ 320 ವಿಮಾನಗಳ ಹಾರಾಟಕ್ಕಾಗಿ ಅನುಕೂಲವಾಗುವಂತೆ ಹೆಚ್ಚುವರಿಯಾಗಿ 127.29 ಕೋಟಿ ಹೆಚ್ಚುವರಿ ಅನುದಾನದ ಕಾಮಗಾರಿಗೆ ಸರ್ಕಾರದಿಂದ ಈಗಾಗಲೇ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಈ ಎಲ್ಲ ತಾಂತ್ರಿಕ ಹಾಗೂ ಭೌತಿಕ ಕಾಮಗಾರಿಗಳು ಶೀಘ್ರದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.
ವಿಜಯಪುರ ವಿಮಾನ ನಿಲ್ದಾಣದಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನ ದೊರಕಲಿದ್ದು, ಕೂಡಲ ಸಂಗಮ, ಆಲಮಟ್ಟಿ, ಕೊಲ್ಲಾಪೂರ, ಸೊಲ್ಲಾಪೂರ ಹೀಗೆ ಪ್ರಸಿದ್ಧ ತಾಣಗಳಿಗೆ ಹೋಗಲು ಈ ವಿಮಾನ ನಿಲ್ದಾಣ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದರು.
ಇನ್ನು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಮಾತನಾಡಿ, ವಿಜಯಪುರ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟಕ್ಕಾಗಿ 220 ಕೋಟಿ ಮಂಜೂರಾಗಿದ್ದು, ಎರಡು ಹಂತದಲ್ಲಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.