ಧಾರವಾಡ : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಸೇರಿ ಎಲ್ಲಾ ಆಚರಣೆಗಳಿಗೆ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಅವಕಾಶ ನೀಡಿದೆ. ಇತ್ತೀಚೆಗೆ ಈ ಮೈದಾನದಲ್ಲಿ ಭಾರಿ ವಿವಾದದ ಬಳಿಕ ಗಣೇಶೋತ್ಸವ ಆಚರಿಸಲಾಗಿತ್ತು, ನಂತರ ಟಿಪ್ಪು ಜಯಂತಿ ಆಚರಣೆಗೆ ಮನವಿ ನೀಡುವಂತೆ ಪಟ್ಟು ಹಿಡಿಯಲಾಗಿತ್ತು.
ಇದೀಗ ಭಾರೀ ಚರ್ಚೆ-ವಿವಾದದ ಬಳಿಕ ಇಂದು ಸಭೆ ನಡೆದಿದ್ದು, ಸಭೆ ಬಳಿಕ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಸೇರಿ ಎಲ್ಲಾ ಆಚರಣೆಗಳಿಗೂ ಅನುಮತಿ ನೀಡಿದ್ದಾರೆ.
ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸಲು ಅನುಮತಿ ನೀಡಬೇಕೆಂದು ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೇಹಾದುಲ್ ಮುಸ್ಲಿಮೀನ್ ಹಾಗೂ ಸಮತಾ ಸೈನಿಕದಳ ಕಾರ್ಯಕರ್ತರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದರು. ಇತ್ತೀಚೆಗೆ ಭಾರೀ ವಿವಾದ ಹುಟ್ಟು ಹಾಕಿದ್ದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಲಾಗಿತ್ತು, ನಂತರ ಟಿಪ್ಪು ಜಯಂತಿ ಆಚರಣೆಗೂ ಅವಕಾಶ ನೀಡುವಂತೆ ಮನವಿ ಸಲ್ಲಿಸಲಾಗಿತ್ತು.
ಹಲವು ದಶಕಗಳಿಂದ ಜಮೀನಿನ ವಿವಾದವಿದ್ದು, ಹಿಂದೆ ಮೈಸೂರಿನ ರಾಜಮನೆತನದ ಒಡೆಯರ್ ಕುಟುಂಬದಿಂದ 10 ಎಕರೆಗೂ ಹೆಚ್ಚು ಭೂಮಿಯನ್ನು ಮುಸ್ಲಿಂ ಸಮುದಾಯಕ್ಕೆ ಸ್ಮಶಾನಕ್ಕಾಗಿ ಹಾಗೂ ಈದ್ಗಾಗಾಗಿ ನೀಡಲಾಗಿತ್ತು. ಈದ್ಗಾ ಮುಸ್ಲಿಂ ಸಮುದಾಯಕ್ಕೆ ವರ್ಷಕ್ಕೆ ಎರಡು ಬಾರಿ ಈದ್ ಪ್ರಾರ್ಥನೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು.