ನಾಗಪುರ: ಮಹಾರಾಷ್ಟ್ರ ಸರ್ಕಾರ ತನ್ನ ಪಾಲಿನ ಪ್ರತಿ ಇಂಚು ಭೂಮಿ ಉಳಿಸಿಕೊಳ್ಳಲು ಹೋರಾಟ ನಡೆಸುವುದು ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಗಡಿ ವಿವಾದದ ಕುರಿತು ನಡೆದ ಚರ್ಚೆಯಲ್ಲಿ ಅವರು ಮಾತನಾಡಿ, ಕರ್ನಾಟಕದಲ್ಲಿರುವ ಮರಾಠಿ ಭಾಷಿಕರಿಗೆ ನ್ಯಾಯ ಒದಗಿಸಲು ಏನು ಮಾಡಬೇಕೋ ಅದೆಲ್ಲವನ್ನೂ ನಮ್ಮ ಸರ್ಕಾರ ಮಾಡಲಿದೆ ಎಂದು ವಿಧಾನಸಭೆಗೆ ಭರವಸೆ ನೀಡಿದರು.
ವಿರೋಧ ಪಕ್ಷದ ನಾಯಕ ಅಜಿತ ಪವಾರ ಅವರು ಗಡಿ ವಿಷಯ ಪ್ರಸ್ತಾಪಿಸಿದರು. ಗಡಿ ವಿಷಯ ಕುರಿತು ಕರ್ನಾಟಕ ಮುಖ್ಯಮಂತ್ರಿ ನೀಡಿರುವ ಹೇಳಿಕೆಗಳಿಂದ ಮರಾಠಿಗರ ಭಾವನೆಗಳಿಗೆ ನೋವಾಗಿದೆ ಎಂದು ಹೇಳಿದ ಅವರು, ಕಲಾಪ ಸಲಹಾ ಸಮಿತಿಯಲ್ಲಿ ತೀರ್ಮಾನವಾದಂತೆ ಗಡಿ ವಿವಾದ ಕುರಿತು ನಿರ್ಣಯವನ್ನು ಮಂಡಿಸದ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿದರು.
ಮಾಜಿ ಮುಖ್ಯಮಂತ್ರಿಯಾದ ಕಾಂಗ್ರೆಸ್ ಪಕ್ಷದ ಪೃಥ್ವಿರಾಜ ಚೌಹಾಣ ಅವರು, ಕರ್ನಾಟಕ ಮುಖ್ಯಮಂತ್ರಿ ಗಡಿ ವಿಷಯ ಕುರಿತು ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಗಮನಕ್ಕೆ ತರಬೇಕು ಎಂದು ಆಗ್ರಹಿಸಿದರು.