ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮಧ್ಯಾಹ್ನ ಹುಬ್ಬಳ್ಳಿಗೆ ಭೇಟಿ ನೀಡಿ ರಾಜ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಯುವಜನೋತ್ಸವ ಉದ್ಘಾಟನಾ ಸಮಾರಂಭ ಒಂದೂವರೆ ಗಂಟೆಯ ಕಾರ್ಯಕ್ರಮವಾಗಿದ್ದು, ಸಂಜೆ 4 ಗಂಟೆಗೆ ಆರಂಭವಾಗಿ ಸಂಜೆ 5.30ರ ಸುಮಾರಿಗೆ ಪೂರ್ಣಗೊಳ್ಳಲಿದೆ. ಪ್ರಧಾನಿ ಮೋದಿಯವರು 30-40 ನಿಮಿಷಗಳ ಕಾಲ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ.
ರೇಲ್ವೆ ಮೈದಾನದಲ್ಲಿ ಉತ್ಸವ ಉದ್ಘಾಟನೆಯಾಗಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಪಥ ಸಂಚಲನ ಸಾಗುವ ಪ್ರದೇಶಗಳನ್ನು ಅಲಂಕರಿಸಲಾಗಿದೆ. ರಸ್ತೆ ದುರಸ್ತಿ ಹಾಗೂ ಅಕ್ಕಪಕ್ಕ ಬಣ್ಣ ಬಳಿಯಲಾಗಿದೆ. ಪ್ರಧಾನಿ ಆಗಮನದ 30 ನಿಮಿಷಗಳ ಮೊದಲು ಮತ್ತು ಅವರ ನಿರ್ಗಮನದ ನಂತರ ಈ ರಸ್ತೆಗಳಲ್ಲಿ ಸಂಚಾರವನ್ನು ನಿಯಂತ್ರಿಸಲಾಗುವದು. ಪೊಲೀಸರು ಈಗಾಗಲೇ ಸಂಚಾರ ವ್ಯತ್ಯಯ ಹಾಗೂ ಮಾರ್ಗ ಬದಲಾವಣೆಗಳನ್ನು ಘೋಷಿಸಿದ್ದಾರೆ.
ಪೊಲೀಸರು ಭಾರಿ ಭದ್ರತಾ ವ್ಯವಸ್ಥೆ ಮಾಡಿದ್ದು ಬಾಂಬ್ ಪತ್ತೆ ಮತ್ತು ಶ್ವಾನ ದಳ ಸಹ ನಿಯೋಜಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ ಕುಮಾರ ಅವರು ಬುಧವಾರ ಕಾರ್ಯಕ್ರಮದ ಸ್ಥಳ ಮತ್ತು ನಗರದಾದ್ಯಂತ ಭದ್ರತಾ ಕ್ರಮಗಳನ್ನು ಪರಿಶೀಲಿಸಿದರು.
ಏಳು ಎಸ್‌ಪಿ ಶ್ರೇಣಿಯ ಅಧಿಕಾರಿಗಳು, 25 ಡಿಎಸ್‌ಪಿಗಳು, 60 ಇನಸ್ಪೆಕ್ಟರ್‌ಗಳು, ಕೆಎಸ್‌ಆರ್‌ಪಿ, ಸಿಎಆರ್ ಮತ್ತು ಡಿಎಆರ್ ಸಿಬ್ಬಂದಿ ಸೇರಿದಂತೆ ಒಟ್ಟು 2,900 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಲೋಕಕುಮಾರ ಮಾಹಿತಿ ನೀಡಿದ್ದಾರೆ.
2012ರಲ್ಲಿ ಮಂಗಳೂರಿನಲ್ಲಿ ಒಂದು ದಿನದ ಯುವಜನೋತ್ಸವ ನಡೆದಿತ್ತು. ಇದೀಗ ಮೊದಲ ಬಾರಿಗೆ ಉತ್ತರ ಕರ್ನಾಟಕಕ್ಕೆ ಯುವಜನೋತ್ಸವದ ಆತಿಥ್ಯ ಸಿಕ್ಕಿದೆ. ಉತ್ಸವದ ಉದ್ಘಾಟನೆ ಹುಬ್ಬಳ್ಳಿಯಲ್ಲಿ ನಡೆದ ನಂತರ ಐದು ದಿನಗಳ ಕಾರ್ಯಕ್ರಮಗಳೆಲ್ಲವೂ ಧಾರವಾಡದಲ್ಲಿ ನಡೆಯಲಿವೆ. ಇದಕ್ಕೆ ಬೇಕಾದ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿದ್ದು, ಕಾರ್ಯಕ್ರಮಕ್ಕೆ ಭಾಗವಹಿಸಬೇಕಿದ್ದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಜನರು ಈಗಾಗಲೇ ಹುಬ್ಬಳ್ಳಿಗೆ ಆಗಮಿಸಿದ್ದಾರೆ.