ಬೆಳಗಾವಿ, ೧೮- ಸೋಮವಾರದಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ರಾಜ್ಯದ ಸಂಪೂರ್ಣ ಆಡಳಿತ ಬೆಳಗಾವಿಗೆ ಬಂದಿದ್ದು. ಚಳಿಗಾಲದ ಅಧಿವೇಶನದಲ್ಲಿ ಬಿಸಿ ಬಿಸಿ ಚರ್ಚೆ ನಿರೀಕ್ಷಿಸಲಾಗಿದೆ. ಭದ್ರತೆಗೆ ಆರು ಸಾವಿರ ಪೊಲೀಸ ಸಿಬ್ಬಂದಿ ನಿಯೋಜಿಸಲಾಗಿದೆ. ಸುಮಾರು ನಾಲ್ಕು ಸಾವಿರ ಸರಕಾರಿ ಸಿಬ್ಬಂದಿ ಅಧಿವೇಶನದ ಕಾರ್ಯದಲ್ಲಿ ತೊಡಗಿದ್ದಾರೆ.
ಡಿಸೆಂಬರರ 19 ರಿಂದ ಡಿಸೆಂಬರ 30 ರವರೆಗೆ 10 ದಿನಗಳ ಕಾಲ ಸುವರ್ಣಸೌಧದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ರಾಜಕೀಯ ರಂಗೇರಲಿದೆ. ಮುಖ್ಯವಾಗಿ ಮತದಾರರ ಮಾಹಿತಿ ಕಳ್ಳತನ, ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರ ಮತ್ತು ಹಗರಣಗಳು, ಗಡಿ ವಿವಾದ ಮತ್ತು ಸರ್ಕಾರದ ವೈಫಲ್ಯಗಳು, ಕೋಮು ಗಲಭೆ ಮತ್ತು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ, ರೈತರ ಬೇಡಿಕೆಗಳು ಮುಂತಾದ ವಿಷಯಗಳನ್ನು ಹಿಡಿದು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ವಿರುದ್ಧ ಮುಗಿಬೀಳಲು ತಯಾರಿ ಮಾಡಿಕೊಂಡಿದೆ.
ಚುನಾವಣೆ ಸಮೀಪಿಸುತ್ತಿರುವ ಕಾರಣ, ವಿರೋಧ ಪಕ್ಷಗಳು ಸರ್ಕಾರ ಯೋಜನೆಗಳು ಭರವಸೆಗಳ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ಇದೆ. 2018 ರ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕಾಂಗ್ರೆಸ್ ನಾಯಕರು ಈಗಾಗಲೇ ಕಿಡಿಕಾರಿದ್ಧಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಸರ್ಕಾರದಿಂದ ಸೂಕ್ತ ಉತ್ತರಕ್ಕೆ ವಿರೋಧ ಪಕ್ಷ ಆಗ್ರಹಿಸುವ ನಿರೀಕ್ಷೆ ಇದೆ. ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ ಹಲವಾರು ನಗರ ಪ್ರದೇಶಗಳಲ್ಲಿ ಮೂಲಭೂತ ಸಮಸ್ಯೆಗಳು ಹೆಚ್ಚಾಗಿದ್ದು, ಸಂತ್ರಸ್ತರಿಗೆ ಸೂಕ್ತ ನೆರವು ಸಿಕ್ಕಿಲ್ಲ ಎನ್ನುವುದನ್ನು ಪ್ರಸ್ತಾಪ ಬರುವ ನಿರೀಕ್ಷೆ ಇದೆ.. ಜೊತೆಗೆ ಎಸ್ಸಿ, ಎಸ್ಟಿ ಮೀಸಲಾತಿ ವಿಚಾರಗಳನ್ನು ವಿರೋಧ ಪಕ್ಷಗಳು ಪ್ರಸ್ತಾಪಿಸುವ ಸಾಧ್ಯತೆಗಳಿವೆ.
ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಘೋಷಿಸಿದ ಬೆನ್ನಲ್ಲೇ, ಪಂಚಮಸಾಲಿಗಳು ಮತ್ತು ಒಕ್ಕಲಿಗರಂತಹ ವಿವಿಧ ಸಮುದಾಯಗಳು ಮೀಸಲಾತಿ ಸಂಬಂಧಿತ ಬೇಡಿಕೆಯನ್ನು ಮುಂದಿಟ್ಟಿವೆ. ರಾಜ್ಯದ ಆರ್ಥಿಕ ಸ್ಥಿತಿ ಹಾಗೂ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಷಯವೂ ಈ ಬಾರಿ ಅಧಿವೇಶನದಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.
ಮಹಾರಾಷ್ಟ್ರ ಜೊತೆಗಿನ ಗಡಿ ವಿವಾದದ ಕಾವು ಚಳಿಗಾಲದ ಅಧಿವೇಶನದಲ್ಲಿ ಬರುವ ನಿರೀಕ್ಷೆ ಇದೆ. ವಿಧಾನಸಭೆ ಚುನಾವಣೆಗೂ ಮುನ್ನ ನಡೆಯುತ್ತಿರುವ ಕೊನೆಯ ಅಧಿವೇಶನ ಇದಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಅಧಿವೇಶನ ಅತ್ಯಂತ ಮಹತ್ವದ್ದಾಗಿದೆ.

