ರಾಯಪುರ : ಭಾರತದಲ್ಲಿ ವಾಸಿಸುತ್ತಿರುವವರೆಲ್ಲ ಹಿಂದೂಗಳು, ಎಲ್ಲರ ಡಿಎನ್ಎಗಳು ಒಂದೇ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮುಖ್ಯಸ್ಥ ಮೋಹನ ಭಾಗವತ ಪುನರುಚ್ಛರಿಸಿದ್ದಾರೆ.
ಛತ್ತೀಸಗಡದಲ್ಲಿ ಸ್ವಯಂಸೇವಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಚರಣೆ ವಿಚಾರದಲ್ಲಿ ಯಾರು ಕೂಡ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಭಾರತದ ವೈವಿಧ್ಯತೆಯಲ್ಲಿ ಏಕತೆಯ ಗುಣ ಬಹಳ ಹಿಂದಿನದು. ಪ್ರಪಂಚದಲ್ಲಿ ಎಲ್ಲರನ್ನು ಒಗ್ಗೂಡಿ ಕರೆದುಕೊಂಡು ಹೋಗುವ ತತ್ವ ಹೊಂದಿರುವ ಕಲ್ಪನೆ ಹೊಂದಿರುವುದು ಹಿಂದುತ್ವದಲ್ಲಿ ಮಾತ್ರ ಎಂಬುದನ್ನು ಪ್ರತಿಪಾದಿಸಿದರು.
1925ರಿಂದಲೂ ನಾವು ಭಾರತದಲ್ಲಿ ವಾಸಿಸುವ ಎಲ್ಲರೂ ಹಿಂದೂಗಳು ಎಂದು ಹೇಳಿಕೊಂಡು ಬಂದಿದ್ದೇವೆ. ನಾವು ಭಾರತವನ್ನು ಮಾತೃಭೂಮಿ ಎಂದು ಪರಿಗಣಿಸಿದ್ದು, ವಿವಿಧತೆಯಲ್ಲಿ ಏಕತೆ ಎಂಬಂತೆ ಬದುಕುತ್ತಿದ್ದೇವೆ. ಧರ್ಮ, ಜಾತಿ, ಮತ, ಭಾಷೆ, ಅವರ ಸಿದ್ಧಾಂತಗಳನ್ನು ಲೆಕ್ಕಿಸದೆ ಈ ದೇಶದಲ್ಲಿ ವಾಸಿಸುವವರನ್ನೆಲ್ಲಾ ಹಿಂದೂ ಎಂದು ಪರಿಗಣಿಸಿದ್ದೇವೆ. ಪ್ರತಿಯೊಬ್ಬರ ನಂಬಿಕೆಯನ್ನು ಗೌರವಿಸುವ ಮತ್ತು ಎಲ್ಲಾ ಭಾರತೀಯರ ಡಿಎನ್ಎ ಒಂದೇ ಎಂಬುದನ್ನು ಒತ್ತಿ ಹೇಳಿದ ಅವರು, ನಮ್ಮ ಪೂರ್ವಿಕರು 40 ಸಾವಿರ ವರ್ಷಗಳಿಂದ ಅಖಂಡ ಭಾರತದಲ್ಲಿದ್ದು, ನಮ್ಮೆಲ್ಲಾ ಡಿಎನ್ಎ ಒಂದೇ. ನಮ್ಮ ಪೂರ್ವಿಕರು ಪ್ರತಿಯೊಬ್ಬರು ತಮ್ಮ ನಂಬಿಕೆ ಮತ್ತು ಆಚರಣೆಗೆ ಅಂಟಿಕೊಂಡಿರಬೇಕು ಎಂದು ತಿಳಿಸಿದರು. ಅವರು ಯಾರನ್ನು ಮತಾಂತರ ಮಾಡಲಿಲ್ಲ ಎಂದರು.
ಪ್ರತಿಯೊಂದು ಧರ್ಮದ ನಂಬಿಕೆ ಮತ್ತು ಆಚರಣೆಗಳನ್ನು ಗೌರವಿಸಬೇಕು ಎಂದು ಕರೆ ನೀಡಿದ ಅವರು, ಪ್ರತಿಯೊಬ್ಬರ ಮಾರ್ಗವನ್ನು ನಾವು ಗೌರವಿಸಬೆಕಿದೆ. ಪ್ರತಿಯೊಬ್ಬರ ಯಶಸ್ಸಿಗೆ ನಾವು ಹಾದಿಯಾಗಬೇಕು. ಆದರೆ ಬೇರೆಯವರ ಬಗ್ಗೆ ಕಾಳಜಿ ಇಲ್ಲದೇ ಸ್ವಾರ್ಥಿಗಳಾಗಬಾರದು ಎಂದು ಹೇಳಿದರು.