ಅಮರಾವತಿ: ಇತ್ತೀಚಿನ ದಿನಗಳಲ್ಲಿ ಮದುವೆ ನಿರಾಕರಿಸಿದರು ಅನ್ನುವ ಕಾರಣಕ್ಕೆ ಕೊಲೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಮತ್ತೊಂದು ಸೇರ್ಪಡೆ ಎನ್ನುವಂತೆ ಇಂಜಿನೀಯರನೊಬ್ಬ ಗೆಳತಿಯನ್ನೇ ಕೊಲೆ ಮಾಡಿದ್ದಾನೆ.
ಈ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪೆದಕಕಣಿ ಮಂಡಲದ ತಕ್ಕೆಲ್ಲಪಾಡು ಗ್ರಾಮದಲ್ಲಿ ನಡೆದಿದೆ. ಕೃಷ್ಣಾ ಜಿಲ್ಲೆಯ ವುಯ್ಯೂರು ಮಂಡಲದ ಕೃಷ್ಣಾಪುರಂ ಗ್ರಾಮದ 20 ವರ್ಷದ ತಪಸ್ವಿ ಕೊಲೆಯಾದ ಯುವತಿ. ವಿಜಯವಾಡ ಮೂಲದ ಸಾಫ್ಟವೇರ ಇಂಜಿನಿಯರ್ ಜ್ಞಾನೇಶ್ವರ ಎಂಬವ ಕೊಲೆ ಮಾಡಿದವನು. 2 ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ತಪಸ್ವಿ ಹಾಗೂ ಜ್ಞಾನೇಶ್ವರ ಪರಿಚಯವಾಗಿದೆ. ಪರಿಚಯವಾದ ನಂತರ ಜ್ಞಾನೇಶ್ವರನೊಂದಿಗೆ ಯುವತಿಗೆ ಸಲುಗೆ ಬೆಳೆದಿದೆ. ಹೀಗಾಗಿ ಇತ್ತೀಚೆಗೆ ತಪಸ್ವಿಯನ್ನು ಜ್ಞಾನೇಶ್ವರ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದನಂತೆ.
ಆದರೆ ತಪಸ್ವಿ ಇದಕ್ಕೆ ನಿರಾಕರಿಸಿದ್ದಳು. ಮತ್ತೆ ಆಕೆಯನ್ನು ಮದುವೆಗೆ ಒಪ್ಪಿಸಲು ಹೋದ ಜ್ಞಾನೇಶ್ವರ ಅವಳ ಜೊತೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಆಕೆಯ ಗೆಳತಿ ಇದನ್ನು ನೋಡಿ ಭಯದಿಂದ ಹೊರಗೆ ಹೋಗಿ ಕೂಗಾಡಿದ್ದಾಳೆ.
ಈ ವೇಳೆ ತಪಸ್ವಿ ಕೂಡ ಹೊರ ಹೋಗಲು ಪ್ರಯತ್ನ ಮಾಡಿದ ಹಿನ್ನೆಲೆಯಲ್ಲಿ ಆಕೆಯನ್ನು ಕೂಡಿ ಹಾಕಿದ್ದಾನೆ. ನಂತರ ಆಕೆಯ ಮುಂದೆಯೇ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಈ ವಿಚಾರ ತಿಳಿದ ಅಕ್ಕಪಕ್ಕದವರು ಮನೆಗೆ ಬಂದು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ನಂತರ ಇಂಜಿನೀಯರನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ದುರ್ದೈವಿ ತಪಸ್ವಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.