ರಾಜ್ಯ ಸರ್ಕಾರ ತರಲು ಉದ್ದೇಶಿಸಿದ್ದ ‘ಅನ್ನ ಭಾಗ್ಯ’ ಯೋಜನೆ ಜಾರಿಗೆ ಸಂಕಷ್ಟ ಎದುರಾಗಿದೆ. ಈ ಕಷ್ಟವನ್ನು ನಮ್ಮ ಹಳ್ಳಿ ಭಾಷೆಯಲ್ಲಿ ಹೇಳುವುದಾದರೆ ‘ಹಸುವಿನ ಗೋದಲಿಯಲ್ಲಿ ಮಲಗಿದ ನಾಯಿ’ ಎನ್ನಬಹುದು. ನಾಯಿ ಹುಲ್ಲು ತಿನ್ನುವುದಿಲ್ಲ. ಆದರೆ ತಾನು ಅಲ್ಲಿ ಮಲಗಿರುವುದರಿಂದ ಹಸುವಿಗೆ ಹುಲ್ಲು ತಿನ್ನಲು ಕೂಡ ಬಿಡುವುದಿಲ್ಲ. ಇದೆಂಥ ವಿಚಿತ್ರ ಅಲ್ಲವೇ! ಅಂಥದ್ದೇ ಸಂಗತಿ ಈಗ ನಡೆದಿದೆ.
ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಅನ್ನಭಾಗ್ಯ ಯೋಜನೆಗೆ ಸುಮಾರು ಒಂದೂವರೆ ಲಕ್ಷ ಟನ್ ಅಕ್ಕಿ ಸಂಗ್ರಹ ಬೇಕಿತ್ತು. ಅದನ್ನು ಖರೀದಿಸಲು ರಾಜ್ಯ ಸರ್ಕಾರ ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆದಿತ್ತು. ನಿಗಮ ಅದಕ್ಕೆ ಒಪ್ಪಿಗೆ ಸೂಚಿಸಿ ಇದೇ ತಿಂಗಳ 12ರಂದು ಪತ್ರ ಬರೆದು, ತನ್ನಲ್ಲಿ ಇರುವ ಅಕ್ಕಿ ಸಂಗ್ರಹದ ವಿವರ ಕೂಡ ತಿಳಿಸಿತ್ತು. ಇದಾದ ಎರಡು ದಿನಗಳಲ್ಲಿ ಕರ್ನಾಟಕ ಸರ್ಕಾರಕ್ಕೆ ಮತ್ತೊಂದು ಪತ್ರ ಬರೆದ ನಿಗಮವು, ಕೇಂದ್ರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಹೊಸ ಸುತ್ತೋಲೆ ಹೊರಡಿಸಿದ್ದು, ಆಹಾರ ನಿಗಮದ ಸಂಗ್ರಹವನ್ನು ರಾಜ್ಯಗಳಿಗೆ ಮಾರುವಂತಿಲ್ಲ, ಅದನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾತ್ರ ಮಾರಬಹುದು ಎಂದು ನಿರ್ದೇಶಿಸಿರುವ ಕಾರಣ ತಾನು ಮೊದಲು ತಿಳಿಸಿದಂತೆ ಅಕ್ಕಿ ಪೂರೈಸಲು ಆಗುವುದಿಲ್ಲ ಎಂದು ಹೇಳಿತು.
ರಾಜ್ಯಗಳ ಜನಪರ ಯೋಜನೆಗಳ ಜಾರಿಗೆ ಅನ್ಯ ಪಕ್ಷಗಳು ಮುಂದಾದಾಗ ಅದಕ್ಕೆ ಕೇಂದ್ರ ಸರ್ಕಾರ ಅಡ್ಡಿ ಆಗಿರುವುದು ಇದೇ ಮೊದಲಲ್ಲ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಬಂದಾಗಿನಿಂದ ಜನಪರ ಉಚಿತ ಯೋಜನೆಗಳನ್ನು ಜಾರಿಗೆ ತರಲು ಯತ್ನಿಸಿದಾಗೆಲ್ಲ ಕೇಂದ್ರ ಅಡ್ಡಗಾಲು ಹಾಕುತ್ತಲೇ ಬಂದಿದೆ. ಅನ್ಯ ಪಕ್ಷಗಳ ರಾಜ್ಯ ಸರ್ಕಾರಗಳು ಜನರ ಮೆಚ್ಚುಗೆ ಗಳಿಸಬಾರದು ಎನ್ನುವುದು ಇದಕ್ಕೆ ಖಚಿತ ಕಾರಣ. ಈ ಬಾರಿ ಆಹಾರ ನಿಗಮಕ್ಕೆ ಸೂಚನೆ ನೀಡಿರುವ ಕೇಂದ್ರ ಸರ್ಕಾರವು, ದೇಶದಲ್ಲಿ ಆಹಾರ ಧಾನ್ಯಗಳ ಬೆಲೆ ನಿಯಂತ್ರಣ ಸಾಧಿಸುವ ದೃಷ್ಟಿಯಿಂದ ಮುಕ್ತ ಮಾರುಕಟ್ಟೆಯಲ್ಲಿ ನಿಗಮದ ಅಕ್ಕಿ ಮತ್ತು ಗೋಧಿ ಮಾರಲು ಉದ್ದೇಶಿಸಿದೆ ಎಂದು ತಿಳಿಸಿದೆ. ವಾಸ್ತವವಾಗಿ ಆಹಾರ ಸಾಮಗ್ರಿಗಳ ಬೆಲೆ ಇಳಿಕೆ ಆಗಿದ್ದು, ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚಿಲ್ಲರೆ ಹಣದುಬ್ಬರ ಕನಿಷ್ಠ ಮಟ್ಟ ಮುಟ್ಟಿದೆ ಎಂದು ರಿಸರ್ವ ಬ್ಯಾಂಕ್ ಇತ್ತೀಚೆಗಷ್ಟೇ ಹೇಳಿಕೆ ನೀಡಿದೆ. ಸರ್ಕಾರ ಹಾಗೆ, ಬ್ಯಾಂಕ್ ಹೀಗೆ, ಇದರಲ್ಲಿ ಯಾವುದನ್ನು ನಂಬುವುದು. ಇದರ ನಡುವೆ ರಾಜ್ಯದ ಬುದ್ಧಿಗೇಡಿ ಬಿಜೆಪಿ ನಾಯಕರು, ಕಾಂಗ್ರೆಸ್ ಜನರನ್ನು ವಂಚಿಸಿ ಅಧಿಕಾರಕ್ಕೆ ಬಂದಿದೆ, ಅದು ತಾನು ಘೋಷಿಸಿದ ಯೋಜನೆ ಜಾರಿ ಮಾಡಲು ಸಾಧ್ಯ ಆಗದೇ ಕೇಂದ್ರದ ಮೇಲೆ ಅನಗತ್ಯ ದೋಷಾರೋಪಣೆ ಮಾಡುತ್ತಿದೆ ಎಂದು ಹೇಳಿದ್ದಾರೆ. ಸುಳ್ಳು ಹೇಳುವುದು ರಾಜಕಾರಣಿಗಳ ಜಾಯಮಾನ. ಆದರೆ ಕನಿಷ್ಠ ಜನ ನಂಬುವಂಥ ಸುಳ್ಳನ್ನಾದರೂ ಹೇಳಲು ಇವರು ಕಲಿಯಬೇಕು.
ರಾಜ್ಯದಲ್ಲಿ ಬಿಜೆಪಿ ಸೋಲುಂಡು ತಿಂಗಳು ಕಳೆಯುತ್ತಾ ಬಂದಿದೆ. ಇಲ್ಲಿನ ಆ ಪಕ್ಷದ ಯಾವೊಬ್ಬ ಮುಖಂಡನಾದರೂ ತನ್ನ ಪಕ್ಷದ ಸೋಲಿಗೆ ಕಾರಣ ಏನೆಂದು ಪ್ರಬುದ್ಧ ಹೇಳಿಕೆ ನೀಡಿದ್ದಾನಾ? ಯಾರದೋ ಕೈಯಲ್ಲಿರುವ ರಿಮೋಟ್ ಕಂಟ್ರೋಲ್ ನಿಂದ ನಡೆಯುವ ಇಂಥ ಜನರಿಂದಾಗಿ ಇನ್ನೂ ಏನೇನು ಕಷ್ಟಗಳನ್ನು ಜನ ಅನುಭವಿಸಬೇಕೋ ತಿಳಿಯದು. ತಾನು ಎಂಭತ್ತು ಕೋಟಿ ಜನರಿಗೆ ಉಚಿತ ಪಡಿತರ ನೀಡುತ್ತಿರುವುದಾಗಿ ಕೇಂದ್ರ ಹೆಮ್ಮೆಯಿಂದ ಹೇಳಿಕೆ ನೀಡಿತ್ತು. ಇದು ಸಾಧನೆ ಅಲ್ಲ, ಆ ಸರ್ಕಾರದ ಆಡಳಿತದ ಬಹುದೊಡ್ಡ ವೈಫಲ್ಯ ಎನ್ನುವುದು ಕೂಡ ಆ ನಾಯಕರಿಗೆ ಗೋಚರಿಸಲಿಲ್ಲ. ಅದನ್ನು ರಾಜ್ಯದ ಯಾವೊಬ್ಬ ಮುಖಂಡನೂ ತಿಳಿ ಹೇಳುವ ಧೈರ್ಯ ಮಾಡಲಿಲ್ಲ.
ಶಿವಮೊಗ್ಗದಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ತಯಾರಾಯಿತು. ಅದಕ್ಕೆ ಏನು ಹೆಸರಿಡಬೇಕು ಎಂದು ತಂಟೆ ತೆಗೆದರೇ ಹೊರತು ಶಿವಮೊಗ್ಗದಂಥ ನಗರಕ್ಕೆ ವಿಮಾನ ನಿಲ್ದಾಣ ಅಗತ್ಯ ಇಲ್ಲ ಎಂದು ಯಾವೊಬ್ಬ ಮಹಾನುಭಾವನೂ ಕೇಂದ್ರಕ್ಕೆ ತಿಳಿಹೇಳಲು ಹೋಗಲಿಲ್ಲ. ಇದು ಸಾಲದು ಎಂಬಂತೆ ವಿಮಾನ ನಿಲ್ದಾಣಗಳ ನಿರ್ಮಾಣ ಕೇಂದ್ರ ಮತ್ತು ಬಿಜೆಪಿಯ ಹೆಮ್ಮೆಯ ಕಾರ್ಯಕ್ರಮ ಎಂದು ಚುನಾವಣೆ ಸಮಯದಲ್ಲಿ ಜಾಹೀರಾತು ನೀಡಲಾಯಿತು. ವಿಮಾನ ನಿಲ್ದಾಣ ನೂರಾರು ಕೋಟಿ ವೆಚ್ಚದಲ್ಲಿ ಉದ್ಘಾಟನೆ ಆಗಿ ಐದು ತಿಂಗಳಾದವು. ಆ ನಿಲ್ದಾಣದಿಂದ ಒಂದೇ ಒಂದು ವಿಮಾನ ಹಾರಲಿಲ್ಲ, ಒಂದೇ ಒಂದು ವಿಮಾನ ಬಂದಿಳಿಯಲಿಲ್ಲ. ಈಗಿರುವ ಸ್ಥಿತಿ ನೋಡಿದರೆ, ಅಲ್ಲಿ ಯಾವುದೇ ವಿಮಾನ ಬರುವ ಲಕ್ಷಣ ಇಲ್ಲ. ಹರಸಾಹಸದಿಂದ ಯಾರಾದರೂ ಅಲ್ಲಿ ವಿಮಾನ ಸೇವೆ ಆರಂಭಿಸಿದರೂ ಅದು ಬಹುಕಾಲ ನಿಲ್ಲುವುದಿಲ್ಲ. ರಾಜ್ಯದಲ್ಲಿ ಸಾಕಷ್ಟು ನೀರಾವರಿ ಕಾಮಗಾರಿಗಳು, ರೈಲು ಮಾರ್ಗಗಳ ನಿರ್ಮಾಣ ಬಾಕಿ ಇದೆ. ಅವುಗಳನ್ನೆಲ್ಲ ಪೂರ್ಣಗೊಳಿಸಲು ಒತ್ತಡ ಹೇರುವ ಬದಲು, ಜನರಿಗೆ ಉಪಯೋಗ ಇಲ್ಲದ ಕಾಮಗಾರಿಗಳನ್ನು ಕೈಗೆತ್ತಿಕೊಂಡ ಕಾರಣ ಇವರೆಲ್ಲರೂ ಜೇಬು ತುಂಬಿಸಿಕೊಂಡರೇ ಹೊರತು ಜನರಿಗೆ ಒಳ್ಳೆಯದೇನೂ ಆಗಲಿಲ್ಲ. ಈಗ ಬಡಜನರಿಗೆ ಉಪಕಾರಿ ಆಗಬಹುದಾದ ಯೋಜನೆಯೊಂದರ ಜಾರಿಗೆ ಸರ್ಕಾರ ಯತ್ನಿಸುತ್ತಿರುವಾಗ, ಅಕ್ಕಿ ಕೊಡಬೇಡಿ ಎಂದು ನಿರ್ದೇಶಿಸಿರುವ ಕೇಂದ್ರ ಇದಕ್ಕೆ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ. ಮುಂದೆ ಬರುವ ಲೋಕಸಭೆ ಚುನಾವಣೆಯಲ್ಲಿ ಕೆಲವಾದರೂ ಸೀಟುಗಳನ್ನು ಬಿಜೆಪಿ ಗೆಲ್ಲಬಹುದು ಎಂದು ಭಾವಿಸಲಾಗಿತ್ತು, ಈಗ ಅವು ಕೂಡ ಕೈತಪ್ಪಿ ಹೋಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ರಾಜ್ಯ ಸರ್ಕಾರಗಳನ್ನು ಕೇಂದ್ರ ನಡೆಸಿಕೊಳ್ಳುವ ರೀತಿ ಇದೇನಾ? ಸಂವಿಧಾನ ರೂಪಿಸಿರುವ ಒಕ್ಕೂಟ ವ್ಯವಸ್ಥೆ ನಡೆಸಬೇಕಾದ ರೀತಿ ಇದೇನಾ? ಸಂವಿಧಾನ ಇರಲಿ, ಅವರೇ ಬಾಯಿ ಬಡಿದುಕೊಳ್ಳುತ್ತಿರುವ ಸಬ್ ಕಾ ವಿಕಾಸ, ಸಬ್ ಕಾ ವಿಶ್ವಾಸಗಾದರೂ ಸ್ವಲ್ಪ ಬೆಲೆ ಬರುವಂತೆ ಅವರು ನಡೆದುಕೊಳ್ಳಬೇಡವೇ? ಕೇಡುಗಾಲಕ್ಕೆ ಕುದುರೆ ಮೊಟ್ಟೆ ಇಡುತ್ತದೆ ಎನ್ನುತ್ತಾರೆ. ನಮ್ಮ ಸರ್ಕಾರಿ ಆಹಾರ ನಿಗಮದ ಗೋದಾಮುಗಳಲ್ಲಿ ಪ್ರತಿವರ್ಷ ಸಾವಿರಾರು ಟನ್ ಧಾನ್ಯ ಇಲಿ, ಹೆಗ್ಗಣಗಳ ಪಾಲಾಗುತ್ತದೆ, ಒಂದಷ್ಟು ಹುಳು ಹಿಡಿದು ಹಾಳಾಗುತ್ತದೆ. ದೇಶದ ಗೋದಾಮುಗಳಲ್ಲಿ ಲಕ್ಷಾಂತರ ಟನ್ ಆಹಾರ ಧಾನ್ಯ ಲಭ್ಯ ಇದೆ. ಹೀಗಿದ್ದೂ ಒಂದು ರಾಜ್ಯದ ಸರ್ಕಾರ ಹಣ ಕೊಟ್ಟು ಅಕ್ಕಿ ಖರೀದಿಗೆ ಮುಂದಾಗಿದ್ದರೂ ಅದಕ್ಕೆ ಸಮ್ಮತಿಸದ ಕೇಂದ್ರದ ನಿಲುವನ್ನು ಏನೆಂದು ಕರೆಯುವುದು. ವಿನಾಶ ಕಾಲೇ ವಿಪರೀತ ಬುದ್ಧಿ ಎಂದಷ್ಟೇ ಹೇಳಬಹುದು. ಈಗಲಾದರೂ ರಾಜ್ಯ ಬಿಜೆಪಿ ನಾಯಕರು ರಾಜ್ಯಕ್ಕೆ ಆಗಿರುವ, ಆಗುತ್ತಿರುವ ಅನ್ಯಾಯ ಅರ್ಥ ಮಾಡಿಕೊಂಡು ಕೇಂದ್ರದವರು ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸುವುದನ್ನು ಬಿಟ್ಟು ತಾವು ಕೂಡ ಈ ನೆಲದ ಜೀವಂತ ವ್ಯಕ್ತಿಗಳು ಎಂಬುದನ್ನು ತೋರಿಸಲಿ. ತಿನ್ನುವ ಅನ್ನಕ್ಕೆ ಕಂಟಕ ಆಗಿರುವ ಕೇಂದ್ರದ ನಿಲುವನ್ನು ಮೊದಲು ಖಂಡಿಸಬೇಕಾದದ್ದು ಕಾಂಗ್ರೆಸ್ ಅಲ್ಲ, ಇದೇ ಬಿಜೆಪಿ. ಆ ಧೈರ್ಯ ಬಂದಾಗ ರಾಜಕೀಯಕ್ಕೆ ಅರ್ಥ ಬರುತ್ತದೆ, ಇಲ್ಲವಾದಲ್ಲಿ ಅದು ಸಣ್ಣತನದ ಹೇಯ ಪ್ರಯೋಗಗಳ ರಂಗ ಆಗಿ ಜನವಿರೋಧಿ ಆಗುತ್ತದೆ. -ಎ.ಬಿ.ಧಾರವಾಡಕರ