ಬೆಳಗಾವಿ, ೨೨: ಆಂಜನೇಯ ನಗರದ ಬಡ್ಡಿ ವ್ಯಾಪಾರಸ್ಥ, ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬನನ್ನು ಬಂಧಿಸಲಾಗಿದ್ದು ಪತ್ನಿ ಉಮಾ ಪದ್ಮಣ್ಣವರ ಸೇರಿದಂತೆ ನಾಲ್ವರು ಆರೋಪಿಗಳಿಗೆ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಬೆಳಗಾವಿ ಎರಡನೇ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆ ಪಂಕಜಾ ಕೊನ್ನೂರ ಅವರು ಈ ಆದೇಶ ಹೊರಡಿಸಿದರು.
ಕೊಲೆಯಾದ ಸಂತೋಷ ಪತ್ನಿ ಉಮಾ ಪದ್ಮಣ್ಣವರ, ಸ್ನೇಹಿತರಾದ ಶೋಭಿತ ಗೌಡ, ಪವನ ರಾಮನಕುಟ್ಟಿ ಅವರಿಗೆ ಅ.16ರಂದು 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು.
ಈಗ ಇನ್ನೋರ್ವ ಆರೋಪಿ ಮಂಜುನಾಥ ತೇರ್ಕಲ್ ಎಂಬವನನ್ನು ದಿ.21, ಸೋಮವಾರ ರಾತ್ರಿ ಬಂಧಿಸಿದ್ದು ಎಲ್ಲ ಆರೋಪಿಗಳನ್ನು ಹೆಚ್ಚುವರಿ ತನಿಖೆಗಾಗಿ ಮಾಳಮಾರುತಿ ಪೊಲೀಸರು ಅ.22 ರಿಂದ ಅ.25ರ ವರೆಗೆ ಪೊಲೀಸ್ ಕಸ್ಟಡಿಗೆ ವಹಿಸುವಂತೆ ನ್ಯಾಯಾಲಯದ ಮುಂದೆ ಮನವಿ ಮಾಡಿದಾಗ ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಅವರನ್ನೆಲ್ಲ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.
ಮಂಜುನಾಥ ತೇರ್ಕಲ್ ಎಂಬವ ಸಂತೋಷ ಪದ್ಮಣ್ಣವರ ಕೊಲೆ ಮಾಡಲು ಮಾತ್ರೆ ಮತ್ತು ಇಂಜೆಕ್ಷನ್ ತಂದು ಉಮಾಗೆ ನೀಡಿದ್ದ ಎನ್ನಲಾಗಿದೆ. ಕೊಲೆಯಾದಾಗಿನಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಮಂಜುನಾಥನನ್ನು ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಮಾ ಸೇರಿದಂತೆ ನಾಲ್ವರು ಆರೋಪಿಗಳನ್ನು ಮಾಳಮಾರುತಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು ವಿಚಾರಣೆ ನಡೆಸಿದ್ದಾರೆ.