ಬೆಳಗಾವಿ: ನಗರದಲ್ಲಿ ಮಟ್ಕಾ ಆಡಲು ಜನರನ್ನು ಹುರಿದುಂಬಿಸುತ್ತಿದ್ದ ಮಟ್ಕಾ ಬುಕ್ಕಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ಬಿಸಿ ಮುಟ್ಟಿಸಿದ್ದಾರೆ.
ನಗರದ ಅನಗೋಳದ ಪರಶುರಾಮ ಬಾಬು ಮೇತ್ರಿ ಎಂಬಾತನನ್ನು ಒಂದು ವರ್ಷಗಳ ಕಾಲ ಅಂದರೆ ಸೆಪ್ಟೆಂಬರ್, 18 – 2023ರ ವರೆಗೆ ಗಡಿಪಾರು ಮಾಡಲಾಗಿದೆ. ಬೆಳಗಾವಿಯಿಂದ ಬಳ್ಳಾರಿ ಜಿಲ್ಲೆಗೆ ಗಡಿಪಾರು ಮಾಡಿ ಗಡಾದಿ ಆದೇಶ ಹೊರಡಿಸಿದ್ದಾರೆ. ಪರಶುರಾಮ ಮೇತ್ರಿ ವಿರುದ್ಧ ಏಳು ಪ್ರಕರಣಗಳು ದಾಖಲಾಗಿದ್ದವು. ಆರೋಪಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಕೂಡ ಆಗಿತ್ತು.
ಆದರೂ ಸಾರ್ವಜನಿಕವಾಗಿ ಮಟ್ಕಾ ಆಡಲು ಜನರನ್ನು ಪ್ರೇರೇಪಿಸುತ್ತಿದ್ದನು. ಈ ಬಗ್ಗೆ ಪೊಲೀಸರು ಈತನನ್ನು ಕರೆಯಿಸಿ ವಿಚಾರಣೆ ನಡೆಸಿ ಅನೇಕ ಸಲ ಎಚ್ಚರಿಕೆ ನೀಡಿದ್ದರೂ ಮಟ್ಕಾ ದಂಧೆಯಲ್ಲಿ ತೊಡಗಿದ್ದನು. ಹೀಗಾಗಿ ಡಿಸಿಪಿ ಗಡಾದಿ ಆರೋಪಿ ಪರಶುರಾಮನಿಗೆ ಗಡಿಪಾರು ಮಾಡುವ ಮೂಲಕ ಸಮಾಜಘಾತುಕರಿಗೆ ಎಚ್ಚರಿಕೆ ನೀಡಿದ್ದಾರೆ.
ಮೂರು ತಿಂಗಳ ಹಿಂದೆಯೂ ಇದೇ ರೀತಿಯಾಗಿ ಮಟ್ಕಾ ಆಡುತ್ತ ಜನರನ್ನು ಪ್ರೇರೇಪಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬೆಳಗಾವಿ ಜಿಲ್ಲೆಯಿಂದ ಡಿಸಿಪಿ ಗಡಾದಿ ಗಡಿಪಾರು ಮಾಡಿದ್ದರು.
ಮಾರೀಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಶ ಯಲ್ಲಪ್ಪ ಯಲ್ಲಾರಿ, ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ವಿಲಾಶ ಶಂಕರ ಬಾಳೆಕುಂದ್ರಿ ಎಂಬಾತರನ್ನು ಗಡಿಪಾರು ಮಾಡಿದ್ದರು. ಈಗ ಮತ್ತೊಬ್ಬ ಆರೋಪಿಯನ್ನು ಗಡಿಪಾರು ಮಾಡಿದ್ದಾರೆ.