ಹೊಸದಿಲ್ಲಿ, 1: ಕೇಂದ್ರ ಸರ್ಕಾರವು ಎಲ್‌ಪಿಜಿ ಗ್ರಾಹಕರಿಗೆ ಮತ್ತೆ ಶಾಕ್ ನೀಡಿದ್ದು, ಡಿಸೆಂಬರ್‌ನ ಮೊದಲ ದಿನವೇ ಎಲ್‌ಪಿಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 21 ರೂಪಾಯಿ ಹೆಚ್ಚಳ ಮಾಡಿದೆ.
ಸಾರ್ವಜನಿಕ ವಲಯದ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡಿದ್ದು, ಡಿಸೆಂಬರ್ 1ರಿಂದಲೇ ಹೊಸ ದರ ಅನ್ವಯವಾಗಲಿದೆ. ದರ ಹೆಚ್ಚಳದ ಬಳಿಕ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಚಿಲ್ಲರೆ ಮಾರಾಟದ ಬೆಲೆ 1796.50 ರೂಪಾಯಿಗೆ ಏರಿಕೆಯಾಗಿದೆ. ಇದು ರಾಷ್ಟ್ರ ರಾಜಧಾನಿ ದೆಹಲಿಯ ಬೆಲೆಯಾಗಿದೆ.
ಹೊಸದಾಗಿ ಬೆಲೆ ಪರಿಷ್ಕರಣೆ ಬಳಿಕ ಕರ್ನಾಕಟ ರಾಜಧಾನಿ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,904 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,968.5 ರೂಪಾಯಿ ಹಾಗೂ ಕೋಲ್ಕತ್ತದಲ್ಲಿ 1,908 ರೂಪಾಯಿ ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ 1,749 ರೂಪಾಯಿಗೆ ಏರಿದೆ.
ಆದರೆ ತೈಲ ಮಾರುಕಟ್ಟೆ ಕಂಪನಿಗಳು ಡಿಸೆಂಬರ್ 1 ರಂದು ಏವಿಯೇಷನ್ ಟರ್ಬೈನ್ ಇಂಧನದ (ಎಟಿಎಫ್) ಬೆಲೆಯನ್ನು ಕಡಿಮೆ ಮಾಡಿವೆ. ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಈಗ ರಾಜಧಾನಿ ದೆಹಲಿಯಲ್ಲಿ 1,06,155.67 ರೂ., ಕೋಲ್ಕತ್ತಾದಲ್ಲಿ 1,44,639.70 ರೂ., ಮುಂಬೈನಲ್ಲಿ 99,223.44 ರೂ. ಮತ್ತು ಚೆನ್ನೈನಲ್ಲಿ ಪ್ರತಿ ಕಿಲೋ ಲೀಟರ್‌ಗೆ 1,09,966.39 ರೂ.ಗೆ ಸಿಗಲಿದೆ.