ಬೆಳಗಾವಿ : ಮಹಾರಾಷ್ಟ್ರದ ಅಕ್ಕಲಕೋಟ, ಜತ್ತ ತಾಲೂಕುಗಳ ಹಲವಾರು ಗ್ರಾಮ ಪಂಚಾಯತಗಳ ನಂತರ ಮಹಾರಾಷ್ಟ್ರದ ಮತ್ತೊಂದು ಗ್ರಾಮ ಪಂಚಾಯತ ಸಹ ತಮ್ಮನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಮಹಾರಾಷ್ಟ್ರ ಸರಕಾರಕ್ಕೆ ಮನವಿಯನ್ನು ಅರ್ಪಿಸಿ, ತಾವು ಬರುವ ಗ್ರಾಮ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಿರುವದಾಗಿ ತಿಳಿಸಿದೆ.
ಲಾತೂರು ಜಿಲ್ಲೆಯ ದೇವಣಿ ತಾಲೂಕಿನ ಕನ್ನಡ ಬಾಹುಳ್ಯದ ಬೊಂಬಳಿ ಗ್ರಾಮ ಪಂಚಾಯತನಲ್ಲಿ ಬುಧವಾರ ಜರುಗಿದ ಮಾಸಿಕ ಗ್ರಾಮ ಪಂಚಾಯತ್ ಸಭೆಯಲ್ಲಿ ತಾವು ಕರ್ನಾಟಕಕ್ಕೆ ಸೇರುವ ಕುರಿತು ಅಧಿಕೃತ ಠರಾವನ್ನು ಒಮ್ಮತದಿಂದ ಪಾಸ್ ಮಾಡಲಾಯಿತು. ಹಾಗೂ ಈ ಕುರಿತು ಲಾತೂರಿನ ಜಿಲ್ಲಾಧಿಕಾರಿಗಳಿಗೆ ಮನವಿಯನ್ನೂ ಅರ್ಪಿಸಿದೆ.
ಕರ್ನಾಟಕದ ಬೀದರ್ ಜಿಲ್ಲೆಗೆ ಹೊಂದಿಕೊಂಡಿರುವ ಲಾತೂರು ಜಿಲ್ಲೆಯಲ್ಲಿ ಬಹಳಷ್ಟು ಕನ್ನಡಿಗರಿದ್ದು, ಬೊಂಬಳಿ ಗ್ರಾಮ ಪಂಚಾಯತ್ ಸೇರಿ ಹಲವು ಪಂಚಾಯತಗಳು ಕನ್ನಡಿಗರ ಅಧೀನದಲ್ಲಿವೆ. ಆದರೆ ಎಂದಿಗೂ ಭಾಷಾ ವಿಷಯದ ಕುರಿತು ಚಕಾರವೆತ್ತದೇ ಅಲ್ಲಿನವರೇ ಆಗಿ ಬದುಕಿದ್ದಾರೆ.
ತಾವು ಕನ್ನಡಿಗರೆಂಬ ಕಾರಣಕ್ಕೆ ಸರಕಾರ ತಮ್ಮ ಗ್ರಾಮಗಳಿಗೆ ಯಾವ ಸೌಲಭ್ಯವನೂ ಒದಗಿಸಿಲ್ಲ. ರಸ್ತೆ, ನೀರು, ಸಾರ್ವಜನಿಕ ಶೌಚಾಲಯ, ರಸ್ತೆ ದೀಪ ಇಲ್ಲ. ಕನ್ನಡ ಶಾಲಾ ಮಕ್ಕಳಿಗೆ ಸರಿಯಾದ ಸಮಯಕ್ಕೆ ಪಠ್ಯ ಪುಸ್ತಕ ಒದಗಿಸದಿರುವದು, ಆಸ್ಪತ್ರೆ, ಕನ್ನಡ ಶಿಕ್ಷಕರ ಕೊರತೆ ಇತ್ಯಾದಿ ಕೊರತೆಗಳನ್ನು ನಮೂದಿಸಿ ಕರ್ನಾಟಕಕ್ಕೆ ಸೇರುವ ಕುರಿತು ಠರಾವು ಮಂಡಿಸಿದೆ. ಅಲ್ಲದೇ ಕರ್ನಾಟಕದಲ್ಲಿ ಹೆಚ್ಚಿನ ಸೌಲಭ್ಯ, ಯೋಜನೆಗಳಿವೆ, ಕೃಷಿಕರಿಗೆ 50,000 ಅನುದಾನವಿದೆ, ಕೃಷಿಗೆ ಪೂರಕವಾದ ಅನುಕೂಲಗಳಿವೆ. ಹಾಗಾಗಿ ತಾವು ಅಲ್ಲಿಗೆ ಸೇರಲು ತೀರ್ಮಾನ ತೆಗೆದುಕೊಂಡಿರುವದಾಗಿ ತಿಳಿಸಿದ್ದಾರೆ.
ಕರ್ನಾಟಕದಂತೆ ನಮ್ಮ ಗ್ರಾಮಗಳನ್ನೂ ಅಭಿವೃದ್ಧಿ ಪಡಿಸಬೇಕು, ಕೃಷಿಗೆ ಅದ್ಯತೆ ನೀಡಬೇಕು, ಆಸ್ಪತೆಗೆ ಎಂಬಿಬಿಎಸ್ ವೈದ್ಯರೂ ಸೇರಿದಂತೆ ಸ್ಟಾಫ್ ನರ್ಸ್ ಮತ್ತು ಅವಶ್ಯಕ ಔಷಧಿ, ಕೃಷಿಗೆ 10 ಎಚ್ ಪಿ ಉಚಿತ ವಿದ್ಯುತ್ ಒದಗಿಸಿದರೆ ಮಾತ್ರ ತಾವು ಕರ್ನಾಟಕಕ್ಕೆ ಸೇರುವ ತಮ್ಮ ಠರಾವನ್ನು ಪುನರ್ ಪರಿಶೀಲಿಸುವದಾಗಿ ಜಿಲ್ಲಾ ಜಿಲ್ಲಾಧಿಕಾರಿಗಳಿಗೆ ಅರ್ಪಿಸಿದ ಮನವಿಯಲ್ಲಿ ತಿಳಿಸಿದ್ದಾರೆ.