ಕೊಪ್ಪಳ: ರಾಜ್ಯದಲ್ಲಿ ಪಂಚಮಸಾಲಿ ಸಮಾಜ ಕಡೆಗಣಿಸಲು ಆಗುವುದಿಲ್ಲ. ಯಾರೇ ಮುಖ್ಯಮಂತ್ರಿ ಆಗಬೇಕೆಂದರೂ ಪಂಚಮಸಾಲಿಗಳ ಆಶೀರ್ವಾದ ಬೇಕೇ ಬೇಕು ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಟಿ ಮೀಸಲಾತಿಗಾಗಿ ಸದನದಲ್ಲಿ ಮೊದಲು ಧ್ವನಿ ಎತ್ತಿದ್ದೇನೆ. ಈವಾಗ ಕೆಲವರು ನಾನು ಕೊಡಿಸಿದ್ದು ನಾನು ಕೊಡಿಸಿದ್ದು ಅಂತಿದ್ದಾರೆ. ನಾನು ಎಲ್ಲ ಜಾತಿಗಳ ಮೀಸಲಾತಿಗಾಗಿ ಆಗ್ರಹಿಸಿದ್ದೇನೆ. ನಮ್ಮ ಜಾತಿಯನ್ನು ಕೇವಲ ಮಂತ್ರಿಗಿರಿ ಪಡೆಯಲು ಬಳಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಬ್ಬ ಸ್ವಾಮಿ ನಮ್ಮ ಜೊತೆ ಪಾದಯಾತ್ರೆಗೆ ಬಂದಿದ್ದ. ಬ್ರೋಕರ್ ಸ್ವಾಮಿ ಬೆಂಗಳೂರಲ್ಲಿ ನಮ್ಮ ಕಾರ್ಯಕ್ರಮ ಆಗದಂತೆ ನೋಡುತ್ತೇನೆ ಅಂದಿದ್ದ. ಎಲ್ಲಾ ಮುಗಿದು ನಮ್ಮ ಹೋರಾಟ ಒಂದು ಹಂತಕ್ಕೆ ಬಂದಿದೆ. ಡಿಸೆಂಬರ್ 19ರಂದು ಮುಖ್ಯಮಂತ್ರಿ ಬೊಮ್ಮಾಯಿ ನಮಗೆ ಮೀಸಲಾತಿ ಕೊಡಬೇಕು, ಕೊಡುತ್ತಾರೆ. ಅದು ಗೊತ್ತಾಗಿ ಹುಚ್ಚ ಸ್ವಾಮಿ ಜಾಗೃತ ಸಭೆ ಮಾಡುತ್ತಾನೆ ಎಂದು ವಾಗ್ದಾಳಿ ಮಾಡಿದರು.