ವಿಜಯಪುರ: ನಾಲಿಗೆ ಹರಿಬಿಟ್ಟು ಸದಾ ವಿವಾದಾತ್ಮಕ ಹೇಳಿಕೆ ನೀಡುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಈಗ ಕೂಡಲ ಸಂಗಮ ಸ್ವಾಮೀಜಿ ಬಿಟ್ಟರೆ ಉಳಿದ ನಮ್ಮ ಸಮಾಜದ ಸ್ವಾಮೀಜಿಗಳು ಬುಕ್ಕಿಂಗ್ ಸ್ವಾಮೀಜಿಗಳು ಎಂದು ಹೇಳಿದ್ದಾರೆ.
ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದ ಮೀಸಲಾತಿಗಾಗಿ ತಮ್ಮ ಜೀವನವನ್ನೇ ಮೀಸಲಾಗಿಟ್ಟವರು ಕೂಡಲಸಂಗಮ ಸ್ವಾಮೀಜಿಗಳು. ಉಳಿದವರೆಲ್ಲಾ ಬುಕ್ಕಿಂಗ್ ಸ್ವಾಮಿಗಳು, ಅವರೆಲ್ಲಾ ರೊಕ್ಕಾ ಹೊಡಕೋತ ಶ್ರೀ ಗುರು ಬಸವಲಿಂಗಾಯ ನಮಃ ಅನ್ನುತ್ತಾರೆ. ಫೈವ್ ಸ್ಟಾರ್ ಹೊಟೇಲ್ ತರಹ ಮಠ ಕಟ್ಟಿಕೊಂಡು ಕುಳಿತಿದ್ದಾರೆ ಎಂದು ಯತ್ನಾಳ ಹೇಳಿದ್ದಾರೆ.
ಈಗ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುತ್ತದೆ ಎಂದು ತಿಳಿದು ನಮಗಿನ್ನು ಉಳಿಗಾವಿಲ್ಲಾ ಎಂಬುದು ಅವರಿಗೆ ಗೊತ್ತಾಗಿದ್ದು ಈಗ ಸಮಾಜದ ಬಗ್ಗೆ ಮಾತನಾಡುತ್ತಿದ್ದಾರೆ. ಗದಗ ಪ್ರವಾಸ ಮಾಡುತ್ತೇವೆ, ಹರಿಹರದಲ್ಲಿ ಸಭೆಯನ್ನು ಮಾಡುತ್ತೇವೆಂದು ಹೇಳುತ್ತಿದ್ದಾರೆಂದು ಪರೋಕ್ಷವಾಗಿ ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ವಿರುದ್ದ ಕಿಡಿಕಾರಿದರು.