ಪ್ರಧಾನಿಗೆ ಪ್ರತಿಭಟನೆ ನಡೆಸುತ್ತಿರುವ ಲೈಂಗಿಕ ದೌರ್ಜನ್ಯಕ್ಕೀಡಾದ ಮಹಿಳೆಯರು ಕಾಣಿಸುತ್ತಿಲ್ಲವೇ ? -ಬೃಂದಾ ಕಾರಟ್

A B Dharwadkar
ಪ್ರಧಾನಿಗೆ ಪ್ರತಿಭಟನೆ ನಡೆಸುತ್ತಿರುವ ಲೈಂಗಿಕ ದೌರ್ಜನ್ಯಕ್ಕೀಡಾದ ಮಹಿಳೆಯರು ಕಾಣಿಸುತ್ತಿಲ್ಲವೇ ? -ಬೃಂದಾ ಕಾರಟ್

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಡಜನರ ಹಿತಕ್ಕಿಂತ ತಮ್ಮ ಶ್ರೀಮಂತ ಗೆಳೆಯರಾದ ಅದಾನಿ, ಅಂಬಾನಿ ಬಗ್ಗೆಯೇ ಹೆಚ್ಚು ಒಲವು ಇರುವ ಕಾರಣ ಲಕ್ಷಾಂತರ ಕೋಟಿ ಕಾರ್ಪೊರೇಟ್ ತೆರಿಗೆಯನ್ನು ಮನ್ನಾ ಮಾಡಿದ್ದಾರೆ.  ಬಡವರಿಗೆ ಆಸರೆಯಾಗಿರುವ ಉದ್ಯೋಗ ಖಾತ್ರಿ ಯೋಜನೆಯ ಮೊತ್ತವನ್ನು ಕಡಿತಗೊಳಿಸಿದ್ದಾರೆ ಎಂದು ಭಾರತ ಕಮ್ಯುನಿಸ್ಟ ಪಕ್ಷದ (ಮಾರ್ಕ್ಸ್‌ವಾದಿ–ಸಿಪಿಐಎಂ)ದ ಪಾಲಿಟ್ ಬ್ಯುರೊ ಸದಸ್ಯೆ ಬೃಂದಾ ಕಾರಟ್ ತಿಳಿಸಿದರು.

ಕಲಬುರಗಿ ಗ್ರಾಮೀಣ ಕ್ಷೇತ್ರದ ಪಕ್ಷದ ಅಭ್ಯರ್ಥಿ ಪಾಂಡುರಂಗ ಮಾವಿನಕರ ಪರವಾಗಿ ಬುಧವಾರ ಆಳಂದ ತಾಲ್ಲೂಕಿನ ನರೋಣಾ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಮೋದಿ ನೀವು ಮನ್ ಕಿ ಬಾತ್ ಬಿಟ್ಟು ಜನರ ಬಡತನ, ನಿರುದ್ಯೋಗದ ಬಗ್ಗೆ ಮಾತಾಡಿ ಎಂದು ಒತ್ತಾಯಿಸಿದರು.

ಬಿಜೆಪಿ ಅತಿ ಕ್ರೂರ ಅಪರಾಧಿಗಳಿಗೆ ಟಿಕೆಟ್ ಕೊಡುತ್ತಿದೆ. ದೇಶಕ್ಕೆ ಪದಕ ತಂದುಕೊಟ್ಟ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯ ಎಸಗಿದ ಕುಸ್ತಿ ಫೆಡರೇಶನ್‌ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ ಸಿಂಗ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಊರೆಲ್ಲ ತಿರುಗುತ್ತಿರುವ ಮೋದಿಗೆ ಈ ಸಂತ್ರಸ್ತ ಮಹಿಳೆಯರು ಕಾಣಿಸುತ್ತಿಲ್ಲವೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಬಲ್ ಎಂಜಿನ್ ಸರ್ಕಾರದಲ್ಲಿ ಅವರ ನೀತಿಯಿಂದಾಗಿ ಶೇ 1ರಷ್ಟು ಜನರ ಬಳಿ ಶೇ 40ರಷ್ಟು ಸಂಪತ್ತು ಕ್ರೋಢೀಕರಣಗೊಂಡಿದೆ. ಉಳಿದ ಶೇ 99 ಜನರು ಶೇ 60ರಷ್ಟು ಸಂಪತ್ತನ್ನು ಹಂಚಿಕೊಳ್ಳಬೇಕಿದೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಅವು ಎಲ್ಲಿ ಹೋದವು? ಸರ್ಕಾರ ಜನತೆಯ ಕವಚವಾಗಬೇಕು. ಆದರೆ ಪ್ರಧಾನಮಂತ್ರಿ ಮೋದಿಯವರು ಅದಾನಿ, ಅಂಬಾನಿಗಳ ಸಂಪತ್ತು ಹೆಚ್ಚಿಸುವ ಕವಚ ಆಗಿದ್ದಾರೆ ಎಂದಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.