ಬೆಂಗಳೂರು : – ಕೆಲಸಕ್ಕಿದ್ದ ಮನೆಯವರ ನಂಬಿಕೆ ಗಳಿಸಿ ಉಂಡ ಮನೆಗೆ ಮನೆಗಳಲ್ಲಿ ಕನ್ನ ಹಾಕುತ್ತಿದ್ದ ೨೩ ನೇಪಾಳಿ ನಾಗರಿಕರನ್ನು ಬೇರೆ ಬೇರೆ ಕಡೆಗಳಲ್ಲಿ ಎಸಗಿದ ಕೃತ್ಯಗಳ ಸಂಬಂಧ ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿ ಅಪಾರ ನಗದು ಸೇರಿ ೨ ಕೋಟಿ ಮೌಲ್ಯದ ಚಿನ್ನಾಭರಣ, ಪಿಸ್ತೂಲ್, ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದಾರೆ.
ಜೆ.ಪಿ.ನಗರ ಪೊಲೀಸರು ಕಾರ್ಯಾಚರಣೆ ಕೈಗೊಂಡು ನೇಪಾಳ ಮೂಲದ ನೇತ್ರಾ ಶಾಹಿ (೪೩), ಲಕ್ಷ್ಮಿ ಸೇಜುವಲ್(೩೩), ಗೋರಕ ಬಹದ್ದೂರ್ (೫೦), ಭೀಮ ಬಹದ್ದೂರ(೪೫), ಅಂಜಲಿ(೩೧) ಅಬೇಶ ಶಾಹಿ (೨೧) ಪ್ರಶಾಂತ(೨೧), ಪ್ರಕಾಶ (೩೧) ನನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ ರೆಡ್ಡಿ ಶನಿವಾರ ತಿಳಿಸಿದರು.
ಜೆಪಿ ನಗರದ ಕಿರಣ ಅವರು ಕುಟುಂಬದ ಸಮೇತ ತಿರುಪತಿಗೆ ತೆರಳಿದ್ದಾಗ ಅವರ ಮನೆಯಲ್ಲಿ ಕೆಲಸಕ್ಕಿದ್ದ ಬಂಧಿತ ಆರೋಪಿಗಳಾದ ಪ್ರೇಮ ಹಾಗೂ ಲಕ್ಷ್ಮಿ ಸೆಜುವಲ್ ಇತರರ ಜೊತೆ ಗುಂಪು ಕಟ್ಟಿಕೊಂಡು ಮನೆಗೆ ನುಗ್ಗಿ ದರೋಡೆ ಮಾಡಿದ್ದರು. ಬಳಿಕ ಕಿರಣ ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಈ ಸಂಬಂಧ ಡಿಸಿಪಿ ಕೃಷ್ಣಕಾಂತ್ ಅವರು ರಚಿಸಿದ್ದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದೆ ಎಂದು ಹೇಳಿದರು.
ಬಂಧಿತರಿಂದ ೧ ಕೆ.ಜಿ ೧೭೩ ಗ್ರಾಂ ಚಿನ್ನಾಭರಣ, ೩೫೦ ಗ್ರಾಂಬೆಳ್ಳಿ, ೭೭.೬೯ ಲಕ್ಷ ನಗದು, ಪಿಸ್ತೂಲ್, ೩ ಜೀವಂತಗುಂಡುಗಳು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ.
ವಯೋವೃದ್ದ ಮಹಿಳೆಯಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅರ್ಜುನ ಶಾಯಿ, ಪೂರನ್ ಶಾಯಿ, ಹರೀಶಶಾಯಿ ಹಾಗೂ ರಮಿತ ಠಾಕೂರ, ವಿಮಲಾ ಬಂಧಿತ ಆರೋಪಿಗಳಾಗಿದ್ದಾರೆ. ಬ್ರಿಜ್ ಭೂಷಣ ಎಂಬುವವರ ಮನೆಯಲ್ಲಿ ಆರೋಪಿ ವಿಮಲಾ ಕೆಲಸಕ್ಕಿದ್ದಳು. ಬ್ರಿಜ್ ಭೂಷಣ ಅವರು ವಯೋವೃದ್ಧ ತಾಯಿಯನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋದಾಗ ಆತನ ಮನೆಯಲ್ಲಿ ತನ್ನ ನೇಪಾಳಿ ನಾಗರಿಕರ ಗುಂಪಿನೊಂದಿಗೆ ವಿಮಲಾ ಕೃತ್ಯ ಎಸಗಿದ್ದಳು. ಪೊಲೀಸರು ಆರೋಪಿಗಳನ್ನು ಕಾರ್ಯಾಚರಣೆ ಕೈಗೊಂಡು ಬಂಧಿಸಿದ್ದು ಬಂಧಿತರಿಂದ ೩೨೦ ಗ್ರಾಂ ಚಿನ್ನಾಭರಣ, ೬.೧೨ಲಕ್ಷ ನಗದು, ೧೯೭ ಗ್ರಾಂ ಬೆಳ್ಳಿ ವಸ್ತು ವಶಕ್ಕೆ ಪಡೆದಿದ್ದಾರೆ ಎಂದು ಅವರು ತಿಳಿಸಿದರು.
ಜಯನಗರ ಪೊಲೀಸರು ಗುಂಪು ಕಟ್ಟಿಕೊಂಡು ಮನೆಗಳವು ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಿಕಾಸ, ಹೇಮಂತ್, ಸುಷ್ಮಿತಾ, ರೋಷನ್ ಪದಂ ಹಾಗೂ ಪ್ರೇಮ ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ.
ಬಿಕಾಸ್ ಹಾಗೂ ಸುಷ್ಮಿತಾ ದಂಪತಿ ಒಬೇದುಲ್ಲಾ ಖಾನ್ ಎಂಬಾತನ ಮನೆಯಲ್ಲಿ ಕೆಲಸಕ್ಕಿದ್ದರು. ಸಮಯ ನೋಡಿಕೊಂಡು ತಮ್ಮ ಗ್ರುಪ್ ನೊಂದಿಗೆ ಕಳ್ಳತನ ಮಾಡಿದ್ದರು. ಬಂಧಿತರಿಂದ ೨೯೨ ಗ್ರಾಂ ಚಿನ್ನಾಭರಣ, ೧೫ ಸಾವಿರ ನಗದು, ೧೬೮ ಗ್ರಾಂ ಬೆಳ್ಳಿ ವಸ್ತುಗಳು, ವಿವಿಧ ಬ್ರ್ಯಾಂಡ್ನ ೧೮ ವಾಚ್ ಗಳು ತಲಾ ಒಂದು ಟ್ಯಾಬ್ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.