ಬೆಳಗಾವಿ, ಮೇ ೨೫: ಬೆಳಗಾವಿ ತಾಲ್ಲೂಕಿನ ಕಿಣಯೆ ಗ್ರಾಮದಲ್ಲಿ ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪಿ ತಿಪ್ಪಣ್ಣ ಡೋಕರೆ ಎಂಬವನನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ ತಿಳಿಸಿದ್ದಾರೆ.
ಬೆಳಗಾವಿಯ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ 21 ವರ್ಷದ ಯುವತಿಗೆ ಪ್ರೀತಿ ಮಾಡುವಂತೆ ಕಾಡುತ್ತಿದ್ದ ತಿಪ್ಪಣ್ಣ ಡೋಕರೆ(27)ಯನ್ನು ಯುವತಿಯ ದೂರಿನ ಮೇರೆಗೆ ಬಂಧನ ಮಾಡಲಾಗಿದೆ ಎಂದರು.
ಬೆಳಗಾವಿ ಗ್ರಾಮೀಣ ಪೊಲೀಸರಿಂದ ಆರೋಪಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದ್ದು ಯುವತಿಗೆ ಸೂಕ್ತ ರಕ್ಷಣೆ ನೀಡುವ ಭರವಸೆಯನ್ನು ಯುವತಿ ಕುಟುಂಬಕ್ಕೆ ನೀಡಲಾಗಿದೆ. ಯುವತಿ ಹೆದರಿ ವಿದ್ಯಾಭ್ಯಾಸ ನಿಲ್ಲಿಸಿದ್ದಾಗಿ ಗೊತ್ತಾಗಿದ್ದು ಕಾಲೇಜಿಗೆ ಹೋಗಲು ಆಕೆಗೆ ಎಲ್ಲ ಭದ್ರತೆ ಒದಗಿಸಲಾಗುವುದು ಎಂದೂ ಆಯುಕ್ತರು ಹೇಳಿದರು. ತಿಪ್ಪಣ್ಣ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆ ಪ್ರಕರಣಗಳ ನಂತರವೂ ಯುವಕರ ಒಂದು ಕಡೆಯ ಪ್ರೇಮ ಮತ್ತು ಯುವತಿಯರಿಗೆ ಬೆದರಿಕೆ ಹಾಕುವ ಪ್ರಕರಣಗಳು ನಿಂತಿಲ್ಲ. ಅಂತಹ ಒಬ್ಬ ಯುವಕನಿಂದ ಮತ್ತು ಪೋಲೀಸರು ತಕ್ಷಣ ಕ್ರಮ ಕೈಗೊಳ್ಳದ ಕಾರಣ ಬೆಳಗಾವಿ ತಾಲೂಕಿನ ಗ್ರಾಮೀಣ ಕುಟುಂಬವೊಂದು ಆತಂಕದಲ್ಲೇ ಕಾಲ ಕಳೆದಿದೆ ಎಂದು ದೂರಲಾಗಿದೆ.
ಪೊಲೀಸ್ ಭಯವಿಲ್ಲದ ಇಂಥ ಯುವಕನ ಕಾರಣ ಕುಟುಂಬವೊಂದು ನರಕಯಾತನೆ ಅನುಭವಿಸುತ್ತಿದ್ದ ಘಟನೆ ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿಗೆ ಬಂದು ಕೊನೆಗೂ ಪೊಲೀಸರು ಈಗ ಕ್ರಮ ಕೈಗೊಂಡಿದ್ದಾರೆ.
ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮನೆ ಮೇಲೆಯೇ ಕಲ್ಲು ತೂರಿ ಕಿಟಕಿ ಗ್ಲಾಸ್ ಪುಡಿ ಪುಡಿ ಮಾಡಿ ಗ್ರಾಮದ ಜನರನ್ನೇ ಬೆಚ್ಚಿ ಬೀಳಿಸಿದ್ದಾನೆ. ಹುಬ್ಬಳ್ಳಿಯ ನೇಹಾಳಂತೆ ಕೊಲೆ ಮಾಡುವ ಬೆದರಿಕೆಯನ್ನೂ ಆತ ಹಾಕಿದ್ದಾನೆ ಎನ್ನಲಾಗಿದೆ.
ಪ್ರೀತಿಸು, ಮದುವೆ ಆಗೆಂದು ಕಳೆದ ಮೂರು ವರ್ಷಗಳಿಂದ ಬೆಳಗಾವಿ ತಾಲೂಕಿನ ಕಿಣೆಯ ಗ್ರಾಮದ ತಿಪ್ಪಣ್ಣ ಡೋಕರೆ ಎಂಬಾತ ಇದೇ ಗ್ರಾಮದ ಬಿಕಾಂ ಓದುತ್ತಿರುವ 21 ವರ್ಷದ ಯುವತಿಯ ಬೆನ್ನು ಬಿದ್ದು ಪೀಡಿಸುತ್ತಿದ್ದ. ನಿತ್ಯ ಕಾಲೇಜಿಗೆ ಹೋಗುವಾಗಲೇ ಬೆನ್ನತ್ತಿ ಯುವತಿಗೆ ಕಿರುಕುಳ ನೀಡುತ್ತಿದ್ದ ಎನ್ನುವ ಆರೋಪ ಯುವತಿಯ ಕುಟುಂಬಸ್ಥರು ಮಾಡಿದ್ದಾರೆ.
ತಿಪ್ಪಣ್ಣನ ಕಿರುಕುಳಕ್ಕೆ ಬೇಸತ್ತು ಕಾಲೇಜಿಗೆ ಹೋಗುವುದನ್ನೇ ಈ ಬಡಪಾಯಿ ಯುವತಿ ನಿಲ್ಲಿಸಿ ಕಿಣೆಯಲ್ಲಿರುವ ಮನೆಯಲ್ಲಿ ತಾಯಿ ಜೊತೆಗೆ ಆಕೆ ವಾಸವಿದ್ದಳು. ಯುವತಿ ಜೊತೆಗೆ ಮದುವೆ ಮಾಡಿ ಕೊಡಬೇಕು, ಇಲ್ಲದಿದ್ದರೆ ಹತ್ಯೆಗೈಯ್ಯುವುದಾಗಿ ಯುವತಿ ಹಾಗೂ ತಾಯಿಗೆ ತಿಪ್ಪಣ್ಣ ಬೆದರಿಕೆ ಹಾಕುತ್ತಿದ್ದನು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಒತ್ತಡ ಹಾಕಲು ಕೆಳ ತಿಂಗಳ ಹಿಂದೆಯೇ ಯುವತಿ ಮನೆಯ ಹಿಂಬಾಗಿಲಿಗೆ ಬೆಂಕಿ ಹಚ್ಚಿ ಈ ಯುವಕ ಹುಚ್ಚಾಟ ಮೆರೆದಿದ್ದಾನೆ. ಇದಾದ ಬಳಿಕ ಮೂರು ದಿನಗಳ ಹಿಂದೆಯೂ ಮನೆಗೆ ಬಂದೂ ಗಲಾಟೆ ಮಾಡಿ ಮನೆಯಲ್ಲಿ ಯಾರೂ ಇಲ್ಲದಿರುವಾಗ ಕಿಟಕಿ ಗ್ಲಾಸ್ ಒಡೆದು ಪುಂಡಾಟ ಮೆರೆದಿದ್ದಲ್ಲದೇ ಮನೆಯ ಪಕ್ಕದಲ್ಲಿಯೇ ಜಮೀನಿಗೆ ಬರುವ ನೆಪವೊಡ್ಡಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.
ತಿಪ್ಪಣ್ಣ ಡೋಕರೆ ಒಂದೇ ಸಮುದಾಯದವನಾದರೂ ಯಾವುದೇ ಕೆಲಸ ಮಾಡದೇ ಊರಲ್ಲಿ ಸುತ್ತಾಡುವ ಆತನಿಗೆ ತಮ್ಮ ಪುತ್ರಿಯನ್ನು ಕೊಡಲು ಕುಟುಂಬಸ್ಥರು ನಿರಾಕರಿಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆಯೇ ತಿಪ್ಪಣ್ಣ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಗ ಪೊಲೀಸರ ಎಚ್ಚರಿಕೆಗೆ ಕೆಲ ದಿನಗಳ ಕಾಲ ಯುವತಿಯ ತಂಟೆಗೆ ಹೋಗದೇ ಆತ ಸುಮ್ಮನಿದ್ದ. ಆತ ಪೀಡಿಸುತ್ತಿರುವುದರ ಬಗ್ಗೆ ಕುಟುಂಬಸ್ಥರು ಮತ್ತೆ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸ ಠಾಣೆಗೆ ಎರಡು ಬಾರಿ ಹೋದರೂ ಕ್ರಮ ಜರುಗಿಸದೇ ನಾಳೆ ಬನ್ನಿ ಎಂದು ಪೊಲೀಸರು ಹೇಳಿ ಕಳಿಸಿದ್ದರು ಎಂದು ಯುವತಿ ಮತ್ತು ಆಕೆಯ ತಾಯಿಯ ಆರೋಪ ಆಗಿದೆ. ಕೊನೆಗೆ ಪತ್ರಕರ್ತರು ಈ ವಿಷಯ ಬಹಿರಂಗಪಡಿಸುತ್ತಿದ್ದಂತೆ ಜಿಲ್ಲೆಯ ಹಿರಿಯ ಪೊಲೀಸರು ಕಾರ್ಯಪ್ರವೃತ್ತರಾಗಿ ಯುವಕನ ಬಂಧನ ಮಾಡಿದ್ದಾರೆ.