ಬೆಳಗಾವಿ : ಮಗಳನ್ನು ಚುಡಾಯಿಸಿದನ್ನು ಪ್ರಶ್ನಿಸಿಲು ಹೋಗಿದ್ದ ವ್ಯಕ್ತಿ ಮತ್ತು ಆತನ ಜೊತೆಗಿದ್ದವರನ್ನೂ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಲಹೊಂಗಲ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಸವೇಶ್ವರ ನಗರದ ಆಶ್ರಯ ಕಾಲೋನಿಯ ಪಿಯುಸಿ 1 ರಲ್ಲಿ ಓದುವ ಸಾದಿಕ ಮನಿಯಾರ ಎಂಬವ ಪಕ್ಕದ ಮನೆಯ ತನ್ನದೇ ಕೋಮಿನ 5ನೇ ತರಗತಿಯ ವಿದ್ಯಾರ್ಥಿನಿಯನ್ನು ಚುಡಾಯಿಸುತ್ತಿದ್ದ ಎನ್ನಲಾಗಿದೆ. ಅದನ್ನು ಆಕೆ ತನ್ನ ಮನೆಯವರಿಗೆ ತಿಳಿಸಿದ್ದಳು.
ಅದಕ್ಕೆ ಹುಡುಗಿಯ ತಂದೆ ಸಾದಿಕನಿಗೆ ಎಚ್ಚರಿಕೆ ನೀಡಿ ಆತನ ಮನೆಯವರಿಗೆ ಬುದ್ಧಿ ಹೇಳಲು ತಿಳಿಸಿದ್ದರು. ನಿನ್ನೆ ಶಾಲೆಯಿಂದ ಮನೆಗೆ ಮರಳುವಾಗ ಆತ ಪುನಃ ಚುಡಾಯಿಸಿದ್ದಾನೆ. ಅಳುತ್ತಾ ಮನೆಗೆ ಬಂದ ಬಾಲಕಿ ಮನೆಯವರಿಗೆ ತಿಳಿಸಿದ್ದಾಳೆ.
ಹುಡುಗಿಯ ತಂದೆ ಇದಕ್ಕೊಂದು ಕೊನೆ ಹೇಳಬೇಕೆಂದು ತಮ್ಮ ಪರಿಚಯಸ್ಥ ಹಿರಿಯರಾದ ಅತಾವುಲ್ಲಾ ಹುಬ್ಬಳ್ಳಿ, ಮುನೀರ ಬೇಪಾರಿ, ರಫೀಕ ಕೊರವಿನಕೊಪ್ಪ ಮತ್ತು ಮೆಹಬೂಬ ಹುಬ್ಬಳ್ಳಿ ಅವರೊಂದಿಗೆ ಸಾದಿಕನ ಮನೆಗೆ ತೆರಳಿ ವಿಚಾರಿಸಿದ್ದಾರೆ.
ಈ ಸಂದರ್ಭದಲ್ಲಿ ತೀವ್ರ ವಾದ-ವಿವಾದ ನಡೆದು ಸಾದಿಕನು ತನ್ನ ಜೊತೆಯಲ್ಲಿದ್ದ ಸ್ನೇಹಿತರಾದ ಚೌಡಪ್ಪ ಬಂಡಿವಡ್ಡರ, ಫುರಕಾನ ಜಮಾದಾರ, ರಮಜಾನ ನದಾಫ ಹಾಗೂ ಕೆಲವರೊಂದಿಗೆ ಸೇರಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಬೈಲಹೊಂಗಲ ಡಿಎಸ್ ಪಿ ಶಿವಾನಂದ ಕಟಗಿ ಅವರು ಸಮದರ್ಶಿಗೆ ತಿಳಿಸಿದರು.
ತೀವ್ರವಾಗಿ ಗಾಯಗೊಂಡಿರುವ ಅತಾವುಲ್ಲಾ ಹುಬ್ಬಳ್ಳಿ, ಮುನೀರ ಬೇಪಾರಿ, ರಫೀಕ ಕೊರವಿನಕೊಪ್ಪ ಮತ್ತು ಮೆಹಬೂಬ ಹುಬ್ಬಳ್ಳಿ ಇವರಿಗೆ ಬೈಲಹೊಂಗಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ಪ್ರಕರಣ ಬೇರೆ ರೂಪ ಪಡೆಯದಂತೆ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಮಾರ್ಕೆಟ್ ಪೊಲೀಸ್ ವಿಭಾಗದ ಎಸಿಪಿ ಎನ್ ವಿ ಭರಮನಿ ನೇತೃತ್ವದಲ್ಲಿ ಸುಮಾರು 20 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.