ಬೆಂಗಳೂರು: ದೇಶವೀಗ ಕೋಮುವಾದಿಗಳ ಹಿಡಿತಕ್ಕೆ ಸಿಕ್ಕಿದ್ದು ಅವರು ಬೀದಿ, ಬೀದಿಗಳಿಗೆ ನುಗ್ಗಿ ಜನತೆಯಲ್ಲಿ ವಿಷ ತುಂಬಿದ್ದಾರೆ ಎಂದು ಖ್ಯಾತ ಲೇಖಕಿ ಅರುಂಧತಿ ರಾಯ್ ಹೇಳಿದರು.
ಗೌರಿ ಲಂಕೇಶ್ ಸ್ಮರಣಾರ್ಥ ಗೌರಿ ಸ್ಮಾರಕ ಟ್ರಸ್ಟ ವತಿಯಿಂದ ಸೋಮವಾರ ಆಯೋಜಿಸಿದ್ದ ಗೌರಿ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದನ್ನೂ ಪ್ರಶ್ನೆ ಮಾಡಬಾರದು ಎಂಬ ಹಂತಕ್ಕೆ ಈಗ ಕೋಮುವಾದಿಗಳು ಬೆಳೆದಿದ್ದಾರೆ, ಕೋಟ್ಯಾಂತರ ಜನರು ಧ್ವನಿ ಎತ್ತದೇ ಮೌನವಾಗಿರುವುದರ ಪರಿಣಾಮ ಇದು ಎಂದರು.
ಜನರಿಗೆ ಅಕ್ಕಿ, ಉಪ್ಪು ಸೇರಿದಂತೆ ಆಹಾರ ಧಾನ್ಯ ವಿತರಿಸುವುದನ್ನೂ ಅಪಾಯಕಾರಿ ಎಂದು ಕೋಮುವಾದಿ ಶಕ್ತಿಗಳು ಬಿಂಬಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಜನರಿಗೆ ಉಚಿತವಾಗಿ ಉಪ್ಪು ಹಂಚಿದರೆ ಅದಕ್ಕೆ ಪ್ರತಿಯಾಗಿ ಮತ ಕೇಳುತ್ತಾರೆ. ಅಭಿವೃದ್ಧಿ, ಬೆಲೆ ಏರಿಕೆ, ಶಿಕ್ಷಣ, ಆರೋಗ್ಯ ಸೇವೆಯಂತಹ ವಿಚಾರಗಳ ಕುರಿತು ತೀವ್ರ ಸಮಸ್ಯೆ ಎದುರಾಗಿದ್ದರೂ ಜನರು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಹೇಳಿದರು.
ಗುಜರಾತ್‌ನಲ್ಲಿ ನಡೆದ ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಯಾಗಿತ್ತು. ಆದರೆ, ಅಪರಾಧಿಗಳೆಲ್ಲರೂ ಈಗ ಹೊರಬಂದಿದ್ದಾರೆ. ಜಗತ್ತಿನ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷ ಇದಕ್ಕೆ ಕಾರಣ ಎಂದು ದೂರಿದರು.