ತ್ರಿಕೋನ ಪ್ರೇಮ : ಮಾರಕಾಸ್ತ್ರ ಹೊಂದಿದ್ದ 30 ಯುವಕರಿಂದ ದಾಳಿ

A B Dharwadkar
ತ್ರಿಕೋನ ಪ್ರೇಮ : ಮಾರಕಾಸ್ತ್ರ ಹೊಂದಿದ್ದ 30 ಯುವಕರಿಂದ ದಾಳಿ

ಬೆಳಗಾವಿ, 2: ಸಿನೆಮಾಗಳಲ್ಲಿ ನೋಡುವ ಲವ್‌ ಟ್ರೈಂಗಲ್‌ ನಂತೆ ಬೆಳಗಾವಿ ಸಮೀಪದ ನಾವಗೆ ಗ್ರಾಮದಲ್ಲಿ ಒಂದೇ ಹುಡುಗಿಯನ್ನು ಪ್ರೀತಿಸುವ ಇಬ್ಬರು ಹುಡುಗರ ಜಟಾಪಟಿಯಲ್ಲಿ ಗ್ರಾಮದ ಜನರು ಜಂಜಾಟ ಅನುಭವಿಸಬೇಕಾದ ಘಟನೆ ನಡೆದಿದೆ.

ಮಂಗಳವಾರ ನಸುಕಿನ ಜಾವ ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ಪ್ರೇಮದ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ಕು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಪುಂಡಾಟ ನಡೆಸಲಾಗಿದೆ. ಗ್ರಾಮಕ್ಕೆ ನುಗ್ಗಿದ ಸುಮಾರು 30 ಯುವಕರಿದ್ದ ಮುಸುಕುಧಾರಿಗಳ ಗುಂಪು ಬಂದೂಕು, ತಲ್ವಾರ್, ಮಚ್ಚು, ಬಡಿಗೆಗಳನ್ನು ಹಿಡಿದು ಗೂಂಡಾವರ್ತನೆ ತೋರಿದ್ದಾರೆ. ಗ್ರಾಮದ ಹಿರಿಯರೂ, ಪಂಚರೂ ಆಗಿರುವವರ ಮನೆ ಸೇರಿ ನಾಲ್ಕು ಮನೆಗಳ ಮೇಲೆ ಕಲ್ಲು ತೂರಿ ರಸ್ತೆಯಲ್ಲಿ ನಿಲ್ಲಿಸಿದ್ದ 3 ಕಾರು, 6 ಬೈಕ್ ಜಖಂಗೊಳಿಸಿದ್ದಾರೆ. ಮನೆಗಳ ಮೇಲೆ ಮಾತ್ರವಲ್ಲದೇ ಗೋಡೆಗೆ ಹಚ್ಚಿದ್ದ ಟೈಲ್ಸ್ ಪುಡಿ ಪುಡಿ ಮಾಡಿದ್ದಾರೆ. ಮನೆ ಒಳಗೂ ನುಗ್ಗಿ ದಾಂಧಲೆ ಮಾಡಿದ್ದಾರೆ.

ನಾವಗೆ ಗ್ರಾಮದ ಪಿಯುಸಿ ಪ್ರಥಮ ವರ್ಷದ ಕಾಲೇಜು ವಿದ್ಯಾರ್ಥಿ ಮತ್ತು ಕರ್ಲೆ ಗ್ರಾಮದ 10ನೇ ತರಗತಿಯ ವಿದ್ಯಾರ್ಥಿನಿ ಪರಸ್ಪರ ಪ್ರೀತಿಸುತ್ತಿದ್ದರು. ಅದೇ ಹುಡುಗಿಯನ್ನು ಬಾದರವಾಡಿಯ ಯುವಕನೊಬ್ಬ ಸಹ ಪ್ರೀತಿಸುತ್ತಿದ್ದ. ಕೆಲವೇ ದಿನಗಳ ಹಿಂದೆ ಬಾದರವಾಡಿಯ ಯುವಕ ನಾವಗೆ ಗ್ರಾಮದ ಪಿಯುಸಿ ಪ್ರಥಮ ವರುಷದ ಕಾಲೇಜು ವಿದ್ಯಾರ್ಥಿಯ ಗ್ರಾಮಕ್ಕೆ ತನ್ನ ಕೆಲ ಸ್ನೇಹಿತರೊಂದಿಗೆ ಬಂದು ಕರ್ಲೆ ಗ್ರಾಮದ ಹುಡುಗಿಯನ್ನು ತಾನು ಪ್ರೀತಿಸುತ್ತಿರುವುದಾಗಿಯೂ ಅದಕ್ಕೆ ನೀನು ಅವಳಿಂದ ದೂರವಿರು ಎಂದು ಹೆದರಿಸಿದ್ದ. ಆಗ ಗ್ರಾಮದ ಪಂಚರೊಬ್ಬರು ಇಬ್ಬರೂ ಯುವಕರಿಗೆ ಬುದ್ಧಿ ಹೇಳಿ ಕಳಿಸಿದ್ದರು.

ಇದೇ ಕಾರಣದಿಂದ ಬಾದರವಾಡಿಯ ಯುವಕ ತನ್ನ ಸ್ನೇಹಿತರೊಂದಿಗೆ ಸೋಮವಾರ ರಾತ್ರಿ ಮಾರಕಾಸ್ತ್ರಗಳಿಂದ ದಾಂಧಲೆ ಮಾಡಿದ್ದಾನೆ. ಪುಂಡರ ಈ ಅಟ್ಟಹಾಸ ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಪ್ರೇಮ ಪ್ರಕರಣದ ಕಾರಣದಿಂದಲೇ ಬೆಳಗಾವಿ ಸಮೀಪದ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದ ಘಟನೆ ಮಾಸುವ ಮುನ್ನವೇ ನಾವಗೆ ಗ್ರಾಮದಲ್ಲಿ ಪ್ರೀತಿಯ ವಿಚಾರಕ್ಕೆ ಪುಂಡಾಟಿಕೆ ನಡೆದ ಘಟನೆ ನೋಡಿದರೆ ಪುಂಡರಿಗೆ ಕಾನೂನಿನ ಹೆದರಿಕೆಯೇ ಇಲ್ಲವೇನೋ ಎನ್ನುವಂತಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.