ಬೆಳಗಾವಿ : ಬೆಳಗಾವಿಯಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಗೆ ಆಗಮಿಸುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು ನಗರ ಪ್ರವೇಶಕ್ಕೆ ಅನುಮತಿ ನೀಡದೇ ತಡೆದದ್ದರಿಂದ ರೋಷಗೊಂಡ ಕನ್ನಡ ಕಾರ್ಯಕರ್ತರು ಮಹಾರಾಷ್ಟ್ರ ರಾಜ್ಯದ ನೋಂದಣಿಯುಳ್ಳ ಟ್ರಕ್ ಗಳ ಮೇಲೆ ಕಲ್ಲೆಸೆದು, ಕಪ್ಪು ಬಸಿ ಬಳಿದ ಘಟನೆ ಹಿರೇಬಾಗೇವಾಡಿ ಟೋಲ್ ಪ್ಲಾಝಾದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿತು. ಇದಕ್ಕೆ ಪ್ರತಿಯಾಗಿ ಮಹಾರಾಷ್ಟ್ರದಲ್ಲಿ ಸಹ ಕರ್ನಾಟಕ ವಾಹನಗಳ ಮೇಲೆ ದಾಳಿ ನಡೆಸಲಾಗಿದ್ದು ಎರಡೂ ರಾಜ್ಯಗಳ ನಡುವಿನ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಮಹಾರಾಷ್ಟ್ರ ಸಚಿವರ ಬೆಳಗಾವಿ ಭೆಟ್ಟಿ ವಿರೋಧಿಸಿ ಕರವೇ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಬಹಿರಂಗ ಸಭೆಯನ್ನು ಮಂಗಳವಾರ ಮಧ್ಯಾಹ್ನ ಏರ್ಪಡಿಸಿತ್ತು. ಸಭೆಯಲ್ಲಿ ಪಾಲ್ಗೊಳ್ಳಲು ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ನೂರಾರು ಕಾರ್ಯಕರ್ತರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುತ್ತಿದ್ದರು. ಆದರೆ ಅವರನ್ನು ನಗರ ಪ್ರವೇಶಿಸಲು ಅನುಮತಿ ನೀಡದೇ ಹಿರೇಬಾಗೇವಾಡಿ ಟೋಲ್ ಪ್ಲಾಝಾ ಬಳಿ ತಡೆದದ್ದನ್ನು ಪ್ರತಿಭಟಿಸಿ ಮಹಾರಾಷ್ಟ್ರದ ವಾಹನಗಳ ಮೇಲೆ ಕನ್ನಡ ಕಾರ್ಯಕರ್ತರು ದಾಳಿ ನಡೆಸಿದರು.
ಹಿರೇಬಾಗೇವಾಡಿ ಟೋಲ್ ಬಳಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿ, ಮಹಾರಾಷ್ಟ್ರದ ಲಾರಿಗಳ ಮೇಲೆ ಮಸಿ ಬಳಿದು, ಕಲ್ಲುತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ನೋಂದಣಿಯಿರುವ ಆರು ಲಾರಿಗಳ ಗಾಜುಗಳು ಪುಡಿ ಪುಡಿಯಾಗಿವೆ. ಹಲವು ವಾಹನಗಳಿಗೆ ಮಸಿ ಬಳಿದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಕೆಲ ಕರವೇ ಕಾರ್ಯಕರ್ತರು ಮಹಾರಾಷ್ಟ್ರ ನೋಂದಣಿಯಿರುವ ಲಾರಿಗಳ ಮೇಲೆ ಹತ್ತಿ ಕನ್ನಡ ಬಾವುಟ ಪ್ರದರ್ಶಿಸಿ, ಧರಣಿ ನಡೆಸಿದರು. ಆಗ ರಾಷ್ಟ್ರೀಯ ಹೆದ್ದಾರಿ 48 ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿತ್ತು.
ಕರವೇ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು. ಇನ್ನೊಂದೆಡೆ ನೂರಾರು ಕರವೇ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿದಂತೆ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಬೆಳಗಾವಿ ಹಿರೇಬಾಗೇವಾಡಿ ಟೋಲ್ ಬಳಿ ಪ್ರತಿಭಟನೆ ನಡೆಸಿ, ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಸುದ್ದಿ ಹರಡುತ್ತಿದ್ದಂತೆ ಮಹಾರಾಷ್ಟ್ರದ ಪುಣೆಯಲ್ಲಿ ಶಿವಸೇನೆಯ ಉದ್ಧವ ಠಾಕ್ರೆ ಬಣದ ಕಾರ್ಯಕರ್ತರು ಕರ್ನಾಟಕ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿ, ಮಸಿ ಬಳಿದರು.
ಪುಣೆ ಡಿಪೋದಲ್ಲಿದ್ದ ಕೆ ಎಸ್ ಆರ್ ಟಿ ಸಿಯ ಎಂಟು ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿಗೈದಿರುವ ಶಿವಸೇನೆ ಕಾರ್ಯಕರ್ತರು, ಬಸ್ ಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದಿದ್ದಾರೆ. ಅಲ್ಲದೇ ಕರ್ನಾಟಕ ನೋಂದಣಿಯಿರುವ ಕಾರುಗಳ ಮೇಲೂ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಉದ್ವಿಗ್ನಗೊಳ್ಳುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ಎಂಈಎಸ್ ಕಾರ್ಯಕರ್ತರು ವಶಕ್ಕೆ
ತಮ್ಮನ್ನು ಭೇಟಿ ಅಹವಾಲು ಕೇಳಲು ಬರಬೇಕಿದ್ದ ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತ ಪಾಟೀಲ ಹಾಗೂ ಶಂಭುರಾಜೆ ದೇಸಾಯಿ ಅವರುಗಳ ಪ್ರವೇಶ ನಿಷೇಧ ಮಾಡಿದ್ದನ್ನೇ ಮುಖ್ಯ ಮಾಡಿಕೊಂಡು ದೂರುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯು ಸಚಿವರ ಭೇಟಿಗೆ ಅನುಮತಿ ನೀಡುವಂತೆ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಲು ತೆರಳಿತ್ತು.
ಸುಮಾರು 50 ರಷ್ಟಿದ್ದ ಕಾರ್ಯಕರ್ತರು ಮನವಿ ಕೊಡಲು ತೆರಳಿದ್ದಾಗ 144 ಕಲಂ ಇದ್ದ ಕಾರಣ ಅವರೆಲ್ಲರಿಗೆ ಅನುಮತಿ ನೀಡದ ಪೊಲೀಸರು ಐದು ಜನ ಮಾತ್ರ ಒಳಗೆ ಹೋಗಬಹುದು ಎಂದು ಸೂಚಿಸಿದರು. ಅದಕ್ಕೆ ಒಪ್ಪದ ಕಾರ್ಯಕರ್ತರು ತಮ್ಮ ನಾಡ ವಿರೋಧಿ ಘೋಷಣೆಯಾದ – ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ, ಭಾಲ್ಕಿ ಪ್ರದೇಶಗಳು ಮಹಾರಾಷ್ಟ್ರದಲ್ಲಿ ಸೇರಲೇ ಬೇಕು ಎಂಬ ಕೂಗಿದರು. ಹಾಗಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಸುಮಾರು ಒಂದು ತಾಸಿನ ಬಳಿಕ ಪೊಲೀಸ್ ಆಯುಕ್ತರ ಕಚೇರಿ ಬಳಿ ಬಿಡುಗಡೆ ಮಾಡಿದರು.
ನಾನೇ ಬೆಳಗಾವಿಗೆ ತೆರಳುತ್ತೇನೆ -ಶರದ ಪವಾರ
ಈ ನಡುವೆ ಮಹಾರಾಷ್ಟ್ರದ ಹಿರಿಯ ಮುಖಂಡ ಶರದ ಪವಾರ ಮುಂಬಯಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, “ಕರ್ನಾಟಕದಲ್ಲಿ ಮಹಾರಾಷ್ಟ್ರದ ವಾಹನಗಳ ಮೇಲಿನ ದಾಳಿ 24 ತಾಸುಗಳಲ್ಲಿ ನಿಲ್ಲದಿದ್ದರೆ ತಾವೇ ಖುದ್ದು ಬೆಳಗಾವಿಗೆ ತೆರಳುವದಾಗಿ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ರಾಜಕೀಯ ಕುಟೀಲತೆ ದೇಶದ ಮುಂದಿಡುವೆ. ಈ ವಿಷಯದ ಕುರಿತು ಕೇಂದ್ರ ‘ಕಾಯ್ದು ನೋಡುವ ನೀತಿ’ ಬಿಟ್ಟು ಮಧ್ಯೆ ಪ್ರವೇಶಿಸಬೇಕು. ಮಹಾರಾಷ್ಟ್ರ ಏಕೀಕರಣ ಸಮಿತಿಯವರಿಂದ ಹಲವು ಫೋನ್ ಕರೆಗಳು ಬರುತ್ತಿವೆ, ಅಲ್ಲಿ ಅವರ ಪರಸ್ಥಿತಿ ಭಯಂಕರವಾಗಿದೆ ಎಂದರು.