ಅಮೃತಸರ: ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖಬೀರ ಸಿಂಗ್ ಬಾದಲ್ ಅವರನ್ನು ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆಗೈಯಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ.
ಸಿಖ್ ಧಾರ್ಮಿಕ ಸಂಸ್ಥೆ ಅಕಾಲ ತಖ್ತನಿಂದ ಧರ್ಮದ್ರೋಹಕ್ಕಾಗಿ ಶಿಕ್ಷಿತರಾಗಿರುವ ಸುಖಬೀರ ಸಿಂಗ್ ಬಾದಲ್ ಅವರನ್ನು ಗುರಿಯಾಗಿರಿಸಿ ಖಲಿಸ್ಥಾನ್ ಬೆಂಬಲಿಗ ನಾರಾಯಣ ಸಿಂಗ್ ಎಂದು ಹೇಳಲಾದ ದುಷ್ಕರ್ಮಿ ಗುಂಡು ಹಾರಿಸಿ ಹತ್ಯೆ ಮಾಡಲು ಯತ್ನಿಸಿದ. ಬಾದಲ್ ಪಾರಾಗಿದ್ದು ಸ್ಥಳದಲ್ಲಿದ್ದವರು ದುಷ್ಕರ್ಮಿಯನ್ನು ತಡೆದಿದ್ದಾರೆ. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ.
ಸುಖಬೀರ ಸಿಂಗ್ ಬಾದಲ್ ತಮ್ಮ ಶಿಕ್ಷೆಯನ್ನು ಮಂಗಳವಾರದಿಂದ ಸ್ವೀಕರಿಸಲು ಪ್ರಾರಂಭಿಸಿದ್ದರು. ಕುತ್ತಿಗೆಗೆ ಫಲಕ, ಕೈಯಲ್ಲಿ ಈಟಿ ಹಿಡಿದ ಸುಖ್ಬೀರ್ ಸಿಂಗ್, ತಮ್ಮ ಗಾಲಿ ಕುರ್ಚಿಯಲ್ಲಿ ಕುಳಿತೇ ಅಮೃತಸರದ ಸ್ವರ್ಣ ಮಂದಿರದ ಪ್ರವೇಶದ್ವಾರದ ಸೇವಾದಾರನ ವೃತ್ತಿ ನಿಭಾಯಿಸುತ್ತಿದ್ದರು.
ಸ್ಥಳಕ್ಕೆ ಹೆಚ್ಚುವರಿ ಪೊಲೀಸರು ದೌಡಾಯಿಸಿದ್ದು, ಆತಂಕಕಾರಿ ವಾತಾವರಣ ನಿರ್ಮಾಣವಾಗಿದೆ.
ಮತ್ತೋರ್ವ ಅಕಾಲಿ ದಳ ನಾಯಕ ಬಿಕ್ರಮ್ ಸಿಂಗ್ ಮಜೀಠಿಯಾ ಕೂಡ ಗುರುದ್ವಾರದ ಪಾತ್ರೆಗಳನ್ನು ತೊಳೆಯುವ ಮೂಲಕ ಶಿಕ್ಷೆಯನ್ನು ಪ್ರಾರಂಭಿಸಿದ್ದರು.