ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ

A B Dharwadkar
ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ

ಗದಗ, ಎ.19:  ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಸೇರಿದಂತೆ ನಾಲ್ವರನ್ನು ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.

ನಗರದ ಚನ್ನಮ್ಮ ವೃತ್ತದ ಸಮೀಪ ಇರುವ ದಾಸರ ಓಣಿಯಲ್ಲಿ ಈ ಭೀಕರ ಘಟನೆ ನಡೆದಿದ್ದು, ನಗರಸಭೆ ಅಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ ಬಾಕಳೆ (27), ಕೊಪ್ಪಳದ ಪರುಶುರಾಮ (55), ಲಕ್ಷ್ಮಿ (45) ಮತ್ತು ಪುತ್ರಿ ಆಕಾಂಕ್ಷಾ (17) ಎಂಬವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.

ಸುನಂದಾ ಬಾಕಳೆ ಪುತ್ರ ಕಾರ್ತಿಕ ಅವರ ಮದುವೆ ತಯಾರಿ ಸಂಬಂಧ ಎಪ್ರಿಲ್​ 17 ರಂದು ಸಂಬಂಧಿಕರಾದ ಪರಶುರಾಮ, ಪತ್ನಿ ಲಕ್ಷ್ಮೀ, ಪುತ್ರಿ ಆಕಾಂಕ್ಷಾ ಕೊಪ್ಪಳದಿಂದ ಗದಗ ನಗರಕ್ಕೆ ಆಗಮಿಸಿದ್ದರು. ಗುರುವಾರ ಎ.18 ರಂದು ರಾತ್ರಿ ಪರಶುರಾಮ ಪತ್ನಿ ಲಕ್ಷ್ಮೀಯವರ ಹುಟ್ಟಿದ ಹಬ್ಬವನ್ನು ಕುಟುಂಬಸ್ಥರೆಲ್ಲ ಆಚರಿಸಿದ್ದಾರೆ. ಬಳಿಕ ಪರಶುರಾಮ ಕುಟುಂಬದವರು ಮನೆಯ ಮೊದಲನೇ ಮಹಡಿಯ ಕೋಣೆಯಲ್ಲಿ ಮಲಗಿದ್ದರು.

ತಡರಾತ್ರಿ ಪರಶುರಾಮ ಕುಟುಂಬ ಮಲಗಿದ್ದ ಕೋಣೆಯ ಗಾಜಿನ ಕಿಟಕಿಯನ್ನು ಒಡೆದು ಒಳ ನುಗ್ಗಿದ ದುಷ್ಕರ್ಮಿಗಳು ಮೂವರನ್ನೂ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕಿಟಿಕಿ ಒಡೆದ ಮತ್ತು ಕಿರಿಚಾಟದ ಸದ್ದು ಕೇಳಿ ಏನಾಯಿತೆಂದು ಕೆಳಗಿನ ಕೋಣೆಯಲ್ಲಿ ಮಲಗಿದ್ದ ಕಾರ್ತಿಕ ಬಾಕಳೆ ನೋಡಲು ಹೋಗಿದ್ದಾರೆ. ಆಗ ದುಷ್ಕರ್ಮಿಗಳು ಕಾರ್ತಿಕ​ನನ್ನೂ ಸಹ ಕೊಲೆ ಮಾಡಿದ್ದಾರೆ. ಬಳಿಕ ದುಷ್ಕರ್ಮಿಗಳು ಮನೆಯ ಮಾಲಿಕ ಪ್ರಕಾಶ ಬಾಕಳೆ ಮತ್ತು ಪತ್ನಿಯಾದ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರು ಮಲಗಿದ್ದ ಕೋಣೆಯ ಬಾಗಿಲು ತಟ್ಟಿದ್ದಾರೆ. ಆದರೆ ದಂಪತಿ ಬಾಗಿಲು ತೆಗೆಯದೇ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಪೊಲೀಸರಿಗೆ ಫೋನ್ ಮಾಡುತ್ತಿದ್ದಂತೆ ದುಷ್ಕರ್ಮಿಗಳು ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ.

ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ದುಷ್ಕರ್ಮಿಗಳು ಚರಂಡಿಯಲ್ಲಿ ಬಿಸಾಕಿದ್ದಾರೆ.  ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದು, ಸಿಸಿಟಿವಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಸ್ ಪಿ ಬಿಎಸ್ ನೇಮಗೌಡ, ಎಎಸ್ ಪಿ ಎಂ.ಬಿ.ಸಂಕದ, ಡಿಎಸ್ ಪಿ ಇನಾಮದಾರ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಶ್ವಾನದಳ, ಫೋರೆನ್ಸಿಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಎಚ್ ​ಕೆ ಪಾಟೀಲ​ ಭೇಟಿ

ಕೊಲೆ ನಡೆದ ಪ್ರಕಾಶ ಬಾಕಳೆ ಅವರ ಮನೆಗೆ ಸಚಿವ ಎಚ್.ಕೆ.ಪಾಟೀಲ​​ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಕುಟುಂಬಸ್ಥರು ಕೊಲೆಗಾರರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು. ಆರೋಪಿಗಳನ್ನು ಕೂಡಲೆ ಬಂಧಿಸಲಾಗುವುದು ಎಂದು ಸಚಿವ ಎಚ್​.ಕೆ ಪಾಟೀಲ ಅವರು​​ ಕುಟುಂಬಸ್ಥರಿಗೆ ಭರವಸೆ ನೀಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.