ಬೆಳಗಾವಿ : ಬೆಳಗಾವಿ ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನ ಸಂಚಾರ ದಟ್ಟನೆ ತಪ್ಪಿಸಲು ಕಾಂಗ್ರೆಸ್ ಸರಕಾರ ಹೊಸ ಯೋಜನೆ ರೂಪಿಸಿದ್ದು, ಲೋಕೋಪಯೋಗಿ ಇಲಾಖೆಯು ನಗರದ ಮಧ್ಯೆ ಸುಮಾರು 10ಕಿಮಿ ಉದ್ದದ ಫ್ಲೈ ಓವರ್ ನಿರ್ಮಿಸಲಿದೆ.
ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿಯವರ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು ಯೋಜನೆಯ ಬ್ಲೂ ಪ್ರಿಂಟ್, ಗ್ರಾಫಿಕ್ ಸಿದ್ದವಾಗಿದೆ.
ಪುಣೆ-ಬೆಂಗಳೂರು ರಾಷ್ಟೀಯ ಹೆದ್ದಾರಿಗೆ ಹೊಂದಿಕೊಂಡಿರುವ ಗಾಂಧಿ ನಗರದಿಂದ ಖಾನಾಪುರ ರಸ್ತೆಯ ಪೀರನವಾಡಿ ಕ್ರಾಸ್ ವರೆಗೆ ನಿಯೋಜಿತ ಮೇಲ್ಸೇತುವೆ ನಿರ್ಮಾಣ ಮಾಡುವ ಸಾಧ್ಯತೆಯಿದೆ. ಈಗಿರುವ ರಸ್ತೆಯ ಮೇಲೆಯೇ ನಿಯೋಜಿತ ಫ್ಲೈ ಓವರ್ ಬರಲಿದೆ.
ಗಾಂಧಿ ನಗರದಿಂದ ಅಶೋಕ ಪಿಲ್ಲರ್, ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚನ್ನಮ್ಮ ವೃತ್ತ, ಬೋಗಾರ್ ವೇಸ್, ಕ್ಯಾಂಪ್ ರಸ್ತೆ, ಕಾಂಗ್ರೆಸ್ ರಸ್ತೆ, ಖಾನಾಪುರ ರಸ್ತೆ ಮೂಲಕ ಪೀರನವಾಡಿವರೆಗೆ ನಿಯೋಜಿತ ಮೇಲ್ಸೇತುವೆ ಬರಲಿದೆ. ಈ ರಸ್ತೆಗೆ ರಾಣಿ ಚನ್ನಮ್ಮ ವೃತ್ತ, ರೈಲ್ವೆ ಸ್ಟೇಷನ್ ಮತ್ತು ರೈಲ್ವೆ ಮೂರನೇ ಸೇತುವೆ ಬಳಿ ಲಿಂಕ್ ಕೊಡಲಾಗುವುದು.
ಲೋಕೋಪಯೋಗಿ ಇಲಾಖೆ ಯೋಜನೆಯ ಅಂದಾಜು ವೆಚ್ಚದ ಕೆಲವೇ ದಿನಗಳಲ್ಲಿ ಪ್ರಕಟಿಸಲಿದ್ದು ಈ ಯೋಜನೆ ಸಚಿವ ಜಾರಕಿಹೊಳಿಯವರ ಕನಸಿನ ಯೋಜನೆಯಾಗಿರುವುದರಿಂದ ಸಾಕಾರಗೊಳ್ಳುವ ಸಾಧ್ಯತೆಯಿದೆ.