ಬೆಳಗಾವಿ, 16: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಇತ್ತೀಚಿಗೆ ಜರುಗಿದ ಸಮಾರಂಭವೊಂದರಲ್ಲಿ “ಬೆಳಗಾವಿ ಪತ್ರಕರ್ತರು ಅಪ್ರಬುದ್ಧರು” ಎಂಬ ಅರ್ಥ ಬರುವ ರೀತಿಯಲ್ಲಿ ಮಾತನಾಡಿದ್ದನ್ನು ಖಂಡಿಸಿರುವ ಬೆಳಗಾವಿ ಪತ್ರಕರ್ತರು, ಅವರ ವಿರುದ್ಧ ಎಐಸಿಸಿ ಮತ್ತು ಕೆಪಿಸಿಸಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಗುರುವಾರ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ‘ಖಂಡನಾ ಸಭೆ’ಯಲ್ಲಿ ಸುಮಾರು 40 ಪತ್ರಕರ್ತರು ಭಾಗವಹಿಸಿ ಕೆಲವು ‘ಖಂಡನಾ ನಿರ್ಣಯ’ ವನ್ನು ಒಮ್ಮತದಿಂದ ತೆಗೆದುಕೊಂಡರು.
1. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಪತ್ರಕರ್ತರಿಗೆ ಮಾಡಿರುವ ಅವಮಾನಕ್ಕೆ ಬಹಿರಂಗವಾಗಿ ಬೇಷರತ್ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಅವರ ಸಭೆಗಳನ್ನು ಬಹಿಷ್ಕರಿಸುವುದು ಮತ್ತು ಅವರ ಯಾವುದೇ ವರದಿಗಳನ್ನು ಪ್ರಕಟಿಸದಿರುವುದು, ದೃಶ್ಯ ಮಾಧ್ಯಮದಲ್ಲಿ ತೋರಿಸದಿರುವುದು.
2. ಅವರು ಮಾಡಿರುವ ‘ಅವಮಾನ’ ದ ಕುರಿತು ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಘಟಕಗಳಿಗೆ ದೂರು ಸಲ್ಲಿಸುವುದು.
3. ತಾವು ತೆಗೆದುಕೊಂಡ ನಿರ್ಣಯಗಳಿಗೆ ರಾಜ್ಯ ಮಟ್ಟದ ಮನ್ನಣೆ, ಬೆಂಬಲ ಪಡೆದುಕೊಳ್ಳಲು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೂ ಮಾಹಿತಿ ನೀಡಲು ನಿರ್ಧರಿಸಲಾಯಿತು.
ಬೆಳಗಾವಿಯಲ್ಲಿ ಕಳೆದ ನವೆಂಬರ 11 ರಂದು ಜರುಗಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಅವರ ಸನ್ಮಾನ ಸಮಾರಂಭದಲ್ಲಿ ಮುಖ್ಯ ಆಮಂತ್ರಿತರಲ್ಲೊಬ್ಬರಾಗಿ ಆಗಮಿಸಿದ್ದ ಲಕ್ಷ್ಮೀ ಹೆಬ್ಬಾಳಕರ ಅವರು ತಾವು ಉಸ್ತುವಾರಿ ಸಚಿವರಾಗಿರುವ ಉಡುಪಿ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲೆಯ ಪತ್ರಕರ್ತರ ಕಾರ್ಯ ನಿರ್ವಹನೆಯ ಕುರಿತು ತುಲನೆ ಮಾಡಿ, “ಬೆಳಗಾವಿ ಪತ್ರಕರ್ತರು ವಿಷಯವಲ್ಲದನ್ನೇ ದೊಡ್ಡದು ಮಾಡುತ್ತಾರೆ. “ಬೆಳಗಾವಿಯಲ್ಲಿ ಬೆಂಕಿ” ಎನ್ನುತ್ತಾರೆ, ಆದರೆ ಅದರಲ್ಲಿ ಹೊಗೆಯೂ ಇರುವುದಿಲ್ಲ. ಆದರೆ ಉಡುಪಿ ಜಿಲ್ಲೆಯ ಪತ್ರಕರ್ತರು ಪ್ರಬುದ್ಧರು, ಸರಕಾರದಿಂದ ಹೇಗೆ ಕೆಲಸ ಮಾಡಿಸಿಕೊಳ್ಳುವುದು ಅವರಿಗೆ ಗೊತ್ತು. ಕರಾವಳಿಯ ಉಡುಪಿ ಬುದ್ಧಿವಂತರ ಜಿಲ್ಲೆ, ಹಾಗಾಗಿ ಅಲ್ಲಿನ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ರಾಜ್ಯಕ್ಕೆ ಮೊದಲಿನ ಸ್ಥಾನದಲ್ಲಿರುತ್ತಾರೆ” ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು.