ಬೆಳಗಾವಿ ಮಹಾಪೌರ ಚುನಾವಣೆ; ಈ ಬಾರಿ ಕನ್ನಡಿಗರೇ ಮೇಯರ್

A B Dharwadkar
ಬೆಳಗಾವಿ ಮಹಾಪೌರ ಚುನಾವಣೆ; ಈ ಬಾರಿ ಕನ್ನಡಿಗರೇ ಮೇಯರ್

(ಸಮದರ್ಶಿ ವಿಶೇಷ)
ಬೆಳಗಾವಿ, ಫೆ. 2: ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಮತ್ತು ಉಪಮಹಾಪೌರ ಅವರ ಅಧಿಕಾರದ ಅವಧಿ ಫೆಬ್ರವರಿ 5 ರಂದು ಮುಕ್ತಾಯಗೊಳ್ಳಲಿದ್ದು, ಫೆಬ್ರವರಿ 6 ಇಲ್ಲವೇ ಎರಡನೇ ವಾರದಲ್ಲಿ ಮೇಯರ್, ಉಪ ಮೇಯರ್ ಹುದ್ದೆಗೆ ಚುನಾವಣೆ ಜರುಗುವ ಸಾಧ್ಯತೆಯಿದೆ.

ಸರಕಾರ ಮಹಾಪೌರ ಹುದ್ದೆಯನ್ನು ಪರಿಶಿಷ್ಟ ಜಾತಿ ಮಹಿಳೆಗೆ ಮತ್ತು ಉಪಮಹಾಪೌರ ಹುದ್ದೆ ಎಲ್ಲರಿಗೂ ಅನ್ವಯವಾಗಲಿದೆ. ಬಿಜೆಪಿಯಿಂದ ಆಯ್ಕೆಯಾಗಿರುವ ವಾರ್ಡ 35ರ ಸದಸ್ಯೆ ಲಕ್ಷ್ಮೀ ರಾಠೋಡ ಮತ್ತು ವಾರ್ಡ 17ರ ಸದಸ್ಯೆ ಸವಿತಾ ಕಾಂಬಳೆ ಮಹಾಪೌರ ಹುದ್ದೆಗೆ ಸ್ಪರ್ದಿಸಲು ಅರ್ಹತೆ ಹೊಂದಿದ್ದು ಇವರಿಬ್ಬರೂ ಕನ್ನಡ ಭಾಷಿಕರೇ ಆಗಿದ್ದಾರೆ.

ಕಾಂಗ್ರೆಸ್ಸಿನಲ್ಲಿ ಎಸ್‌ಸಿ ಮಹಿಳೆ ಇಲ್ಲ. ಆದ್ದರಿಂದ ಕಾಂಗ್ರೆಸ್‌ನಿಂದ ಆಕಾಂಕ್ಷಿಗಳು ಸ್ಪರ್ಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಾಗಾಗಿ ಮೇಯರ್ ಸ್ಥಾನಕ್ಕೆ ಈ ಇಬ್ಬರ ನಡುವೆ ಪೈಪೋಟಿ ಏರ್ಪಡುವುದು ನಿಶ್ಚಿತ. ಬಿಜೆಪಿ ಆಡಳಿತ ಪಕ್ಷವಾಗಿರುವುದರಿಂದ ಮೇಯರ್ ಚುನಾವಣೆ ಸುಲಭ ಎಂಬುದು ಒಂದು ಲೆಕ್ಕಾಚಾರ. ಹಾಗಾಗಿ ಮಹಾಪೌರ ಹುದ್ದೆಗೆ ಅವಿರೋಧ ಆಯ್ಕೆ ಸಾಧ್ಯತೆಯಿದೆ.

ಮಹಾಪೌರ ಶೋಭಾ ಸೋಮನಾಚೆ ಮತ್ತು ಉಪಮಹಾಪೌರ ರೇಷ್ಮಾ ಪಾಟೀಲ ಅವರು ಫೆಬ್ರವರಿ 6, 2023 ರಂದು ಆಯ್ಕೆಯಾದರು. ಮೇಯರ್ ಮತ್ತು ಉಪಮೇಯರ್ ಅವರ ಒಂದು ವರ್ಷದ ಅವಧಿ ನಿಗದಿಯಂತೆ ಫೆಬ್ರವರಿ 5 ರಂದು ಕೊನೆಗೊಳ್ಳಲಿದ್ದು ನಿಯಮದಂತೆ ಫೆ.6ರಿಂದ ನೂತನ ಮಹಾಪೌರ ಅಧಿಕಾರ ಸ್ವೀಕರಿಸಬೇಕು.

ಪಾಲಿಕೆಯ ಒಟ್ಟು 58 ವಾರ್ಡಗಳಲ್ಲಿ ಬಿಜೆಪಿ 35 ಸ್ಥಾನಗಳಲ್ಲಿ, ಸ್ವತಂತ್ರರು (4 ಎಂಇಎಸ್ ಸೇರಿದಂತೆ) 12, ಕಾಂಗ್ರೆಸ್ 10 ಮತ್ತು 1 ರಲ್ಲಿ ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್) ಪಕ್ಷವು ಗೆದ್ದಿದೆ.

ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976ಕ್ಕೆ 2012ರಲ್ಲಿ ತಿದ್ದುಪಡಿ ತಂದಿದ್ದು, ಕಾಯ್ದೆ ಪ್ರಕಾರ ನೂತನ ಮೇಯರ್ ಆಯ್ಕೆಯಾಗುವವರೆಗೆ ಹಿಂದಿನ ಮೇಯರ್ ಅವರೇ ಉಸ್ತುವಾರಿ ವಹಿಸಿದ್ದಾರೆ. ಆದರೆ ಯಾವುದೇ ಕಡತ ವಿಲೇವಾರಿ ಆದೇಶವನ್ನು ಪ್ರಸ್ತುತಪಡಿಸುವ ಅನುದಾನಕ್ಕೆ ಸಹಿ ಹಾಕುವ ಅಧಿಕಾರವನ್ನು ಮೇಯರ್ ಹೊಂದಿರುವುದಿಲ್ಲ.

ಚುನಾವಣೆಗೆ ಸೂಚನೆ ನೀಡಿದ ನಂತರ ಏಳು ದಿನಗಳ ಕಾಲಾವಕಾಶ ನೀಡಬೇಕು ಎಂಬುದು ನಿಯಮ. ಆದರೆ ಈ ಬಾರಿ ಅಂತಹ ಯಾವುದೇ ಸೂಚನೆ ನೀಡಿಲ್ಲ. ಹಾಗಾಗಿ ಮೇಯರ್ ಮತ್ತು ಉಪಮೇಯರ್ ಚುನಾವಣೆ ಯಾವಾಗ ನಡೆಯಲಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಭಾಷೆ ಆಧರಿಸಿ ಆಯ್ಕೆ:
————————-
ಕಳೆದ ಬಾರಿ ಮಹಾಪೌರ, ಉಪಮಹಾಪೌರ ಹುದ್ದೆಗಳು ಮರಾಠಿ ಭಾಷಿಕರ ಪಾಲಾಗಿದ್ದವು. ದಕ್ಷಿಣ ಶಾಸಕ ಅಭಯ ಪಾಟೀಲ ಹಾಗೂ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರ ತಂತ್ರಗಾರಿಕೆಯಿಂದಾಗಿ ಚುನಾವಣೆ ಸಂದರ್ಭದಲ್ಲಿ ಮರಾಠಿ ಭಾಷಿಗರೇ ಮೇಲುಗೈ ಸಾಧಿಸಿದರು. ಕಳೆದ ಬಾರಿ ವಿಧಾನಸಭಾ ಚುನಾವಣೆಗೆ ಎರಡು ತಿಂಗಳು ಬಾಕಿ ಇದ್ದ ಹಿನ್ನೆಲೆಯಲ್ಲಿ ಮರಾಠಿ ಮತಗಳನ್ನು ಸೆಳೆಯುವ ಉದ್ದೇಶದಿಂದ ಮರಾಠಿ ಭಾಷಿಕರಿಗೆ ಮೇಯರ್, ಉಪಮೇಯರ್ ಹುದ್ದೆಗಳನ್ನು ಉಡುಗೊರೆಯಾಗಿ ನೀಡಿ ಶಾಸಕರು ಸಂತೃಪ್ತರಾಗಿದ್ದರು. ಆದರೆ ಈ ಬಾರಿ ಮೇಯರ್ ಹುದ್ದೆಗೆ ಅರ್ಹತೆ ಪಡೆದಿರುವ ಇಬ್ಬರೂ ಮಹಿಳೆಯರು ಕನ್ನಡ ಮಾತನಾಡುವವರೇ ಆಗಿದ್ದಾರೆ.

ಈ ಬಾರಿ ಉಪಮಹಾಪೌರ ಸ್ಥಾನ ಸಾಮಾನ್ಯ ವರ್ಗಕ್ಕಿರುವುದರಿಂದ ಬಿಜೆಪಿಯ ಹಿರಿಯ ಸದಸ್ಯರು, ಪ್ರಭಾವಿ ಮಹಿಳೆಯರು ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಕಾರಣ ಉಪಮಹಾಪೌರ ಸ್ಥಾನಕ್ಕೆ ಬಹುತೇಕ ಪೈಪೋಟಿ ನಡೆಯುವುದು ಖಚಿತವಾಗಿದೆ.

ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಪಾಲಿಕೆ ಸದಸ್ಯ ಶ್ರೇಯಸ್ ನಕಾಡಿ ಹೇಳಿದರು. ಮೇಯರ್ ಚುನಾವಣೆ ಚುನಾಯಿತ ಸದಸ್ಯರ ಹಕ್ಕು. ಶಾಸಕ ಅಭಯ ಪಾಟೀಲ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಿಲ ಬೆನಕೆ ಅವರ ಮಾರ್ಗದರ್ಶನದಲ್ಲಿ ಚುನಾಯಿತ ಪ್ರತಿನಿಧಿಗಳು ಸೂಕ್ತ ತೀರ್ಮಾನ ಕೈಗೊಂಡು ಮೇಯರ್, ಉಪಮೇಯರ್ ಆಯ್ಕೆಗೆ ನಾಂದಿ ಹಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಫೆಬ್ರುವರಿ ಮೊದಲ ವಾರದಲ್ಲಿ ಮೇಯರ್ ಚುನಾವಣೆಯ ಅಧಿಸೂಚನೆ ಹೊರಡಿಸಲಿದ್ದು, ಏಳು ದಿನಗಳ ಅವಧಿಯಲ್ಲಿ ಚುನಾವಣೆ ನಡೆಸಲಾಗುವುದು ಎಂದು ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣನವರ ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.