ಬೆಳಗಾವಿ, ಡಿಸೆಂಬರ್ 21: ನಗರದ ಪ್ರಧಾನ ಅಂಚೆ ಕಚೇರಿ ಬಳಿ ಇರುವ ಪಾಸಪೋರ್ಟ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಜನ ಹೈರಾಣಾಗುವಂತಾಗಿದೆ. ಪಾಸಪೋರ್ಟ ಪಡೆಯಲು ಅಥವಾ ನವೀಕರಿಸಲು ಆನಲೈನ್ ಮೂಲಕ ಜನ ಸಮಯ ನಿಗದಿ ಮಾಡಿಕೊಂಡು ಇಲ್ಲಿಗೆ ಬರುತ್ತಾರೆ. ಆದರೆ ಅರ್ಧ ಗಂಟೆ ಅಥವಾ ಹೆಚ್ಚೆಂದರೆ ಒಂದು ಗಂಟೆಯಲ್ಲಿ ಮುಗಿದು ಹೋಗಬಹುದಾದ ದಾಖಲೆಗಳ ಪರಿಶೀಲನೆ ಮತ್ತು ಅಪಲೋಡ್ ಮಾಡಲು ಜನತೆ ಆರರಿಂದ ಏಳು ತಾಸು ಕಾಯುವಂತಾಗಿದೆ.
ಪ್ರಸ್ತುತ ದಾಖಲೆ ಪರಿಶೀಲನೆಗಾಗಿ ಇಬ್ಬರು ಸಿಬ್ಬಂದಿ ಮಾತ್ರ ಇಲ್ಲಿರುವುದು ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ನಮ್ಮ ಪತ್ರಿಕೆಯ ಪ್ರತಿನಿಧಿ ಬುಧವಾರ ಪಾಸಪೋರ್ಟ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿನ ಸಮಸ್ಯೆಗಳು ಅನಾವರಣಗೊಂಡಿವೆ.
ಉದಾಹರಣೆಗೆ ನೋಡುವುದಾದರೆ ಬೆಳಿಗ್ಗೆ ಸುಮಾರು 10 ಗಂಟೆಗೆ ನಿಮ್ಮ ಅಪಾಯಿಂಟ್ಮೆಂಟ್ ಇದ್ದರೆ ನಿಮ್ಮ ನಂಬರ್ ಬರಲು ಸಂಜೆಯಾಗುತ್ತದೆ. ಇದರ ಅರಿವಿಲ್ಲದೇ ಚಿಕ್ಕ ಮಕ್ಕಳೊಂದಿಗೆ ಇಲ್ಲಿಗೆ ಬರುವ ತಾಯಂದಿರು, ವಯಸ್ಸಾದವರು ವಿಪರೀತ ಪಡಿಪಾಟಲು ಪಡುವಂತಾಗಿದೆ. ಬೆಳಿಗ್ಗೆ ಹತ್ತರಿಂದ ಚಿಕ್ಕ ಮಕ್ಕಳೊಂದಿಗೆ ಇಲ್ಲಿ ಬಂದು ಕೂತಿದ್ದೇವೆ. ಮಧ್ಯಾಹ್ನ ನಾಲ್ಕಾದರೂ ಕೆಲಸ ಆಗುತ್ತಿಲ್ಲ, ಮಕ್ಕಳು ಹಸಿವಿನಿಂದ ಕಿರಿ ಕಿರಿ ಮಾಡುತ್ತಿದ್ದಾರೆಂದು ಹಲವರು ಹಲುಬಿದರು.
ಆದರೆ ಬೆಳಗಾವಿಗೆ ಹತ್ತಿರದ ಹುಬ್ಬಳ್ಳಿ ಪಾಸಪೋರ್ಟ ಕಚೇರಿಯಲ್ಲಿನ ಸ್ಥಿತಿ ವಿಭಿನ್ನವಾಗಿದೆ. ಅಲ್ಲಿ ಮಾತ್ರ ಬಹುತೇಕ ನಿಗದಿತ ಸಮಯಕ್ಕೆ ನಿಮ್ಮ ದಾಖಲಾತಿ ಪರಿಶೀಲನೆ, ಅಪಲೋಡ್ ಮುಗಿದು ಹೋಗುತ್ತದೆ. ಹೀಗಿರುವಾಗ ಬೆಳಗಾವಿಯಲ್ಲಿ ಮಾತ್ರ ಈ ಸಮಸ್ಯೆ ಏಕೆ ಎಂಬುದು ತಿಳಿಯದಾಗಿದೆ.
ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ನಾಲ್ವರು ಸಂಸದರಿದ್ದಾರೆ. ಮಂಗಲಾ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕೆಲ ಭಾಗಗಳಲ್ಲಿ ಬರುವ ಅನಂತ ಕುಮಾರ ಹೆಗಡೆ ಮತ್ತು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಇಲ್ಲಿದ್ದಾರೆ. ಆದರೂ ಜನ ತಮ್ಮ ಹಕ್ಕು ಪಡೆಯಲು ಪರದಾಡುವಂಥ ಪರಿಸ್ಥಿತಿ ಇರುವುದು ದುರ್ದೈವ. ಸಂಸದ ಈರಣ್ಣಾ ಕಡಾಡಿ ಅವರನ್ನು ಹೊರತುಪಡಿಸಿ ಇತರ ಸಂಸತ್ ಸದಸ್ಯರು ಹೆಸರಿಗೆ ಮಾತ್ರ ಸಂಸದರಾಗಿದ್ದು ಜಿಲ್ಲೆಯ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ಕಾಣುತ್ತಿಲ್ಲ.
ಬೆಳಗಾವಿ ಪಾಸಪೋರ್ಟ ಕಚೇರಿಗೆ ಮತ್ತಷ್ಟು ಸಿಬ್ಬಂದಿಯನ್ನು ನೇಮಿಸಲು ಕೇಂದ್ರ ಸರ್ಕಾರ ಮುಂದಾಗಬೇಕಿದೆ. ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಅವರು ಈ ವಿಷಯದಲ್ಲಿ ಆಸ್ಥೆ ವಹಿಸಲಿ ಎಂಬುದು ಜನರ ಒತ್ತಾಯವಾಗಿದೆ. ಇನ್ನು ಸಂಸತ್ ಸದಸ್ಯರಾದ ಈರಣ್ಣಾ ಕಡಾಡಿ, ಮಂಗಲಾ ಅಂಗಡಿ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಈ ದಿಸೆಯಲ್ಲಿ ಕ್ರಮ ವಹಿಸಿದರೆ ಜನರ ಸಮಸ್ಯೆಗೆ ಪರಿಹಾರ ಸಿಕ್ಕೀತು.