ಸಮದರ್ಶಿ ವಿಶೇಷ
ಬೆಳಗಾವಿ : ಕೃಷಿ ಕಾರ್ಯಕ್ಕೆ ಕಾರ್ಮಿಕರ ಕೊರತೆ, ಕಾರ್ಮಿಕರು ಲಭ್ಯವಾದರೂ ಹೆಚ್ಚಿನ ಕೂಲಿಗೆ ಬೇಡಿಕೆ, ಬಿತ್ತನೆ ಬೀಜ ಮತ್ತು ರಸ ಗೊಬ್ಬರದ ಬೆಲೆಯೇರಿಕೆ ಮುಂತಾದ ಹಲವು ಕಾರಣಗಳಿಂದ ಬಾಧಿತನಾಗಿರುವ ಅನ್ನದಾತನ ಕ್ಷೇತ್ರಕ್ಕೆ ಆಧುನಿಕ ತಂತ್ರಜ್ಞಾನವೊಂದು ವರವಾಗಿ ಪರಿಣಮಿಸಿದೆ. ಬೆಳಗಾವಿಯ ರೈತರೊಬ್ಬರು ಬೆಳೆಗೆ ರಸಗೊಬ್ಬರ ಹಾಕಲು ಕೃಷಿ ಕಾರ್ಮಿಕರ ಬದಲು ಡ್ರೋನ್ ಯಂತ್ರ ಬಳಸಿಕೊಂಡು ಯಶಸ್ವಿಯಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ರಸಗೊಬ್ಬರ, ಬಿತ್ತನೆ ಬೀಜ ಮುಂತಾದವುಗಳ ನಿರ್ಮಾಣ ಮಾರಾಟದಲ್ಲಿ ತೊಡಗಿರುವ ಇಪ್ಕೋ ಸಂಸ್ಥೆಯು ಕೃಷಿ ಕಾರ್ಯಗಳಿಗೆ ಕಾರ್ಮಿಕರ ಕೊರತೆ ಕಂಡು ಚೆನ್ನೈ ನಲ್ಲಿರುವ ಗರುಡಾ ಏರೋಸ್ಪೇಸ್ ನೊಂದಿಗೆ ಸೇರಿ ರಸಗೊಬ್ಬರ ಸಿಂಪಡಿಸುವ ಡ್ರೋನ್ ಯಂತ್ರವನ್ನು ತಯಾರಿಸಿದೆ.
ಬೆಳಗಾವಿ ತಾಲೂಕಿನ ಕಡೋಲಿಯಲ್ಲಿ ಕೃಷಿ ಸೇವಾ ಕೇಂದ್ರ ಹೊಂದಿರುವ ಉಮೇಶ ಕಲ್ಲಪ್ಪ ದೇಸಾಯಿ ಅವರು ತಮ್ಮದೇ ಗ್ರಾಮದ ರೈತ ರಮೇಶ ಮಾಯನಾಚ್ಛೆಯವರಿಗೆ ಈ ಕುರಿತು ಮಾಹಿತಿ ನೀಡುತ್ತಾರೆ. ಮೊದಲೇ ಕೃಷಿ ಕಾರ್ಯಗಳಿಗೆ ಕಾರ್ಮಿಕರನ್ನು ಹೊಂದಿಸಲು ಹೆಣಗುತ್ತಿದ್ದ ರಮೇಶ ಅವರು ತಮ್ಮ ಹೊಲಕ್ಕೆ ರಸಗೊಬ್ಬರ ನೀಡಲು ಡ್ರೋನ್ ಬಳಕೆಗೆ ಒಪ್ಪಿಗೆ ಕೊಡುತ್ತಾರೆ.
ರಮೇಶ ಅವರ 5 ಎಕರೆ ಹೊಲದಲ್ಲಿ ಡ್ರೋನ್ ಪೈಲಟ್ ಅಶ್ವಿನ್ ಅವರ ತಂಡವು 50 ಲೀಟರ್ ರಸಗೊಬ್ಬರವನ್ನು ಕೇವಲ 50 ನಿಮಿಷಗಳಲ್ಲಿ ಸಿಂಪಡಿಸಿದೆ. ಉತ್ತರ ಕರ್ನಾಟಕದಲ್ಲಿ ತನ್ನ ವ್ಯವಹಾರ ಹೆಚ್ಚಿಸಿಕೊಳ್ಳುವುದಕ್ಕಾಗಿ “ಗರುಡಾ ಏರೋಸ್ಪೇಸ್”, ತನ್ನ ಡ್ರೋನ್ ಗಳ ಕಾರ್ಯ ನಿರ್ವಹಣೆ ಪರೀಕ್ಷಿಸಲು ಹೊಲಗಳನ್ನು ಬಳಸಿಕೊಳ್ಳುತ್ತಿರುವುದಕ್ಕೆ ಪ್ರತಿಯಾಗಿ ರೈತರಿಗೆ ವಿನಾಯಿತಿ ನೀಡುತ್ತಿದೆ. ಹಾಗಾಗಿ ಪ್ರತಿ ಎಕರೆಗೆ 300 ರೂಪಾಯಿ ದರ ನಿಗದಿ ಪಡಿಸಿ, 5 ಎಕರೆ ಸಿಂಪಡಿಕೆ ಮಾಡಿದ್ದಕ್ಕೆ ರಮೇಶ ಅವರದು 1,500 ರೂಪಾಯಿ ಬಿಲ್ ಆಗುತ್ತದೆ. ಆದರೆ ಪ್ರಾಯೋಗಿಕವಾಗಿರುವದರಿಂದ ರಮೇಶ ಅವರಿಂದ ಕೇವಲ 600 ರೂಪಾಯಿ ಪಡೆಯಲಾಯಿತು.
ಹಣ ಮತ್ತು ಸಮಯ ಉಳಿಸಿಕೊಂಡ ಸಂತಸದಲ್ಲಿ “ಸಮದರ್ಶಿ”ಯೊಂದಿಗೆ ಮಾತನಾಡಿದ ರಮೇಶ ಅವರು, ತಾವು 5 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದು ಕಳೆದ ವಾರ ರಸಗೊಬ್ಬರ ಅಗತ್ಯವಾಗಿ ಸಿಂಪಡಿಸಲೇಬೇಕಿತ್ತು. ಹಾಗಾಗಿ ತಮ್ಮ ಗ್ರಾಮದ ಕೃಷಿ ಸೇವಾ ಕೇಂದ್ರದ ಉಮೇಶ ಕಲಪ್ಪ ದೇಸಾಯಿಯವರ ಮೂಲಕ “ಗರುಡಾ ಏರೋಸ್ಪೇಸ್” ಸಂಪರ್ಕಿಸಿ ಡ್ರೋನ್ ಸೇವೆ ಪಡೆದುಕೊಂಡಿರುವುದಾಗಿ ತಿಳಿಸಿದರು.
ಹೊಲದ ಕೆಲಸ ಒಬ್ಬರಿಂದ ಸಾಧ್ಯವೇ ಇಲ್ಲ. ಮೊದಲಿನಂತೆ ಕಾರ್ಮಿಕರೂ ಸಮಯಕ್ಕೆ ಸರಿಯಾಗಿ ಲಭ್ಯವಾಗುವದಿಲ್ಲ, ದೊರೆತರೂ ವಿಪರೀತ ಕೂಲಿ ಕೇಳುತ್ತಾರೆ. ಆದರೆ “ಗರುಡಾ ಏರೋಸ್ಪೇಸ್” ಆಪತ್ಪಾಂಧವನಂತೆ ಆಗಮಿಸಿ ತಮ್ಮ ಕೆಲಸ ಒತ್ತಡ ಕಡಿಮೆ ಮಾಡಿತು ಎಂದು ಅವರು ವಿವರಿಸಿದರು.
“ಐದು ಎಕರೆ ಹೊಲಕ್ಕೆ ರಸಗೊಬ್ಬರ ಸಿಂಪಡಿಕೆಗೆ ಐದು ಕಾರ್ಮಿಕರು ಐದು ದಿನ ತೆಗೆದುಕೊಳ್ಳುತ್ತಾರೆ. ಪ್ರತಿಯೊಬ್ಬರಿಗೆ ದಿನಕ್ಕೆ 400 ರೂಪಾಯಿ ಕೂಲಿ. ಈ ಲೆಕ್ಕದಲ್ಲಿ ದಿನಕ್ಕೆ 2,000 ರೂಪಾಯಿ ಆದರೆ ಐದು ದಿನಕ್ಕೆ 10,000 ರೂಪಾಯಿ ಕೂಲಿಯಾಗುತ್ತದೆ. ಆದರೆ ಡ್ರೋನ್ ಬಳಸಿದ್ದರಿಂದ ಸಾಕಷ್ಟು ಹಣ ಉಳಿದದ್ದು ಮಾತ್ರವಲ್ಲದೇ ಸಮಯವೂ ಉಳಿದಿದೆ. ಕಾರ್ಮಿಕರ ಕೊರತೆಯಿಂದ ಬಳಲುತ್ತಿರುವ ಕೃಷಿ ಕ್ಷೇತ್ರಕ್ಕೆ ಡ್ರೋನ್ ವರವಾಗಿ ಪರಿಣಮಿಸಲಿದೆ” ಎಂದು ಆಶಿಸಿದರು.
ಡ್ರೋನ್ ಮೂಲಕ ರಸ ಗೊಬ್ಬರ ಸಿಂಪಡಿಕೆ ಈ ಭಾಗದಲ್ಲಿ ಮೊದಲನೇ ಸಲವಾಗಿದ್ದರಿಂದ ಮತ್ತು “ಗರುಡಾ ಏರೋಸ್ಪೇಸ್” ಪ್ರಚಾರ ಮಾಡಿದ್ದರಿಂದ ರಮೇಶ ಅವರ ಹೊಲದಲ್ಲಿನ ಡ್ರೋನ್ ಪ್ರಯೋಗ ವೀಕ್ಷಿಸಲು ಸಾಕಷ್ಟು ರೈತರು ನೆರೆದಿದ್ದರು. ನಿರೀಕ್ಷೆಗೂ ಮೀರಿ ಹಣ ಮತ್ತು ಸಮಯ ಉಳಿತಾಯವಾದದ್ದನ್ನು ಕಂಡು ಕಡೋಲಿ ಮತ್ತು ಸುತ್ತಲಿನ ಗ್ರಾಮದ 12 ರೈತರು ತಮ್ಮ ಹೊಲದಲ್ಲೂ ರಸಗೊಬ್ಬರ ಸಿಂಪಡಿಸಲು “ಗರುಡಾ ಏರೋಸ್ಪೇಸ್” ಗೆ ಆರ್ಡರ್ ನೀಡಿದ್ದಾರೆ.
ಒಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಕೃಷಿ ಕ್ಷೇತ್ರಕ್ಕೆ ವರವಾಗಿ ಲಭ್ಯವಾಗಿದೆ.