ಬೆಳಗಾವಿ: ಒಂದೆರಡು ದಶಕಗಳ ಹಿಂದೆಯೇ ಆಗಿ ಹೋಗಬೇಕಿದ್ದ ಬೆಳಗಾವಿ ಜನರ ಬಹುಬೇಡಿಕೆಯ ಬೈಪಾಸ್ ರಿಂಗ್ ರೋಡ್ ನಿರ್ಮಾಣಕ್ಕಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜಿಆರ್ ಇನಫ್ರಾ ಪ್ರಾಜೆಕ್ಟ್ಸ ಕಂಪನಿಗೆ ಗುತ್ತಿಗೆ ನೀಡಿದ್ದು, 912 ದಿನಗಳಲ್ಲಿ ಯೋಜನೆಯ ಕೆಲಸವನ್ನು ಪೂರ್ಣಗೊಳಿಸಲು ಗಡುವು ನೀಡಲಾಗಿದೆ.
ದಿನೇ ದಿನೇ ತೀವ್ರ ರಸ್ತೆ ಸಂಚಾರ ಸಮಸ್ಯೆಯಿಂದ ನಲುಗುತ್ತಿರುವ ಬೆಳಗಾವಿ ನಗರದ ವರ್ತುಲ ರಸ್ತೆಯ ಕೆಲಸ ಒಂದೆರಡು ದಶಕಗಳ ಹಿಂದೆಯೇ ಆಗಬೇಕಿತ್ತು. ದಶಕಗಳಿಂದ ನಮ್ಮ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಯೋಜನೆಯನ್ನು ಮಾಡಿ ಮುಗಿಸದೇ ನೆನೆಗುದಿಗೆ ಬೀಳಿಸಿಕೊಂಡು ಬಂದಿದ್ದರು. ಈಗ ತೀವ್ರ ಟ್ರಾಫಿಕ್ ಸಮಸ್ಯೆ ಆಗುತ್ತಿರುವ ಕಾರಣ ಯೋಜನೆಗೆ ಯತ್ನಿಸಲಾಗುತ್ತಿದೆ. ಜಮೀನುಗಳಿಗೆ ಬಂಗಾರದ ಬೇಡಿಕೆ ಬಂದಿರುವ ಈ ಸಮಯದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದರಿಂದ ಸಹಜವಾಗಿ ರೈತರಿಂದ ತೀವ್ರ ವಿರೋಧ ಕಂಡು ಬರುತ್ತಿದೆ. ಇಂದಿನ ಈ ಸಮಸ್ಯೆಗೆ ನಮ್ಮ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ಮತ್ತು ಉತ್ತರ ಕರ್ನಾಟಕದ ಬಗೆಗಿನ ಸರ್ಕಾರಗಳ ಮಲತಾಯಿ ಧೋರಣೆಗಳೇ ಮುಖ್ಯ ಕಾರಣವಾಗಿದ್ದು ಇದರಿಂದಾಗಿ ವರ್ತುಲ ರಸ್ತೆಯ ಕೆಲಸ ಇನ್ನೂ ಡೋಲಾಯಮಾನ ಸ್ಥಿತಿಯಲ್ಲಿಯೇ ಇದೆ.
4/6 ಲೇನ್ ವರ್ತುಲ ರಸ್ತೆ ಕಾಮಗಾರಿ ಗುತ್ತಿಗೆ ನೀಡಲು ಪ್ರಾಧಿಕಾರವು 1,083.45 ಕೋಟಿ ರೂ.ಗಳ ಟೆಂಡರ್ ಕರೆದಿತ್ತು. ಆರು ಕಂಪನಿಗಳು ಟೆಂಡರ್ಗಳನ್ನು ಸಲ್ಲಿಸಿದ್ದವಾದರೂ ಅದರಲ್ಲಿ ಜಿಆರ್ ಇನ್ಫ್ರಾ ಲಿಮಿಟೆಡ್ಗೆ ಸೇರಿದ 897 ಕೋಟಿ 37 ಲಕ್ಷ ರೂ.ಗಳ ಟೆಂಡರ್ ಅರ್ಜಿ ಆಯ್ಕೆಯಾಗಿದೆ.
ಈ ಯೋಜನೆಗಾಗಿ 31 ಹಳ್ಳಿಗಳ ರೈತರ ಸುಮಾರು 1,272 ಎಕರೆ ಭೂಮಿ ಬೇಕಾಗಲಿದೆ. ಪ್ರಸ್ತಾವಿತ ಬೆಳಗಾವಿಯ ಬೈಪಾಸ್ ವರ್ತುಲ ರಸ್ತೆ ಯೋಜನೆ ಜಾರಿಯಾದರೆ ಅಗಸಗೆ, ಅಂಬೇವಾಡಿ, ಬಾಚಿ, ಭಾದರವಾಡಿ, ಬೆಳಗುಂದಿ, ಬಿಜಗರ್ಣಿ, ಗೊಜಗೆ, ಹೊಂಗ, ಕಡೋಲಿ, ಕಾಕತಿ, ಕಲಕಂಬ, ಕಲ್ಲೇಹೊಳ, ಕಾಮಕರಟ್ಟಿ, ಕಣಬರ್ಗಿ, ಕೊಂಡಸಕೊಪ್ಪ, ಮಣ್ಣೂರ ಮತ್ತಿತರ ಗ್ರಾಮಗಳ ರೈತರ ಭೂಮಿ ಹೋಗುತ್ತದೆ ಎನ್ನಲಾಗಿದೆ.
ಶೀಘ್ರದಲ್ಲೇ ವರ್ತುಲ ರಸ್ತೆ ಯೋಜನೆ ಕಾಮಗಾರಿಯನ್ನು ಪ್ರಾರಂಭಿಸಲಿದೆ ಎಂಬ ಸುದ್ದಿ ತಿಳಿದು ರೈತರು ಮತ್ತೆ ಆಂದೋಲನ ಪ್ರಾರಂಭಿಸಲು ಸಜ್ಜಾಗಿದ್ದು ರೈತರ ಫಲವತ್ತಾದ ಭೂಮಿಯನ್ನು ಉಳಿಸಲು ಮೇಲ್ಸೇತುವೆ ಸ್ಥಾಪನೆಯಂತಹ ಆಯ್ಕೆಗಳು ಸರ್ಕಾರಕ್ಕೆ ಇವೆ ಎಂದು ಹೇಳುತ್ತಿದ್ದಾರೆ.