ಬೆಳಗಾವಿ : “ಸರಕಾರದ ಮೇಲೆ ನಮಗೆ ನಂಬಿಕೆಯಿಲ್ಲ, ಅಲ್ಲಿಯೂ ಇಲ್ಲಿಯೂ ಬಿಜೆಪಿ ಸರಕಾರವಿರುವದರಿಂದ ಮಹಾರಾಷ್ಟ್ರ ಸಚಿವರನ್ನು ಕರ್ನಾಟಕ ಸರ್ಕಾರ ಬೆಳಗಾವಿಗೆ ಬರಲು ಬಿಡುವ ಸಾಧ್ಯತೆಯಿದೆ. ಹಾಗಾಗಿ ನಾವೇ ಖುದ್ದು ಅವರನ್ನು ತಡೆಯಲೆಂದೇ ಇಲ್ಲಿಗೆ ಬಂದಿದ್ದೇವೆ. ರಾಜ್ಯಕ್ಕೆ ಸವಾಲು ಹಾಕಿರುವ ಸಚಿವರು ತಾವು ಹಾಕಿರುವ ಸವಾಲು ಈಡೇರಿಸಲಿ” ಎಂದು ಕರ್ನಾಟಕ ಏಕೀಕರಣ ಸಮೀತಿ ಮರು ಸವಾಲು ಹಾಕಿದೆ.
ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ನಿಷೇಧಿಸಲು ಆಗ್ರಹಿಸಿ ಬೆಂಗಳೂರಿನ “ಕರ್ನಾಟಕ ಏಕೀಕರಣ ಸಮಿತಿ” ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸೋಮವಾರ ಉರುಳು ಪ್ರತಿಭಟನೆ ನಡೆಸಿತು.
ಮಹಿಳೆಯರು ಸೇರಿದಂತೆ ಸುಮಾರು 50 ಕಾರ್ಯಕರ್ತರು ಮಹಾರಾಷ್ಟ್ರ ಸರಕಾರದ ವಿರುದ್ಧ ಘೋಷಣೆ ಕೂಗಿ, ರಾಜ್ಯ ಸರಕಾರ ಬೆಳಗಾವಿಗೆ ಬಂದೇ ಬರುವದಾಗಿಯೂ, ಯಾವ ಶಕ್ತಿಯೂ ತಮ್ಮನ್ನು ತಡೆಯದು ಎಂದು ಹೇಳಿರುವ ಸಚಿವರ ರಾಜ್ಯ ಪ್ರವೇಶವನ್ನು ಸರಕಾರ ಅಧಿಕೃತವಾಗಿ ನಿಷೇಧಿಸಬೇಕು, ಇಲ್ಲದಿದ್ದರೆ ತಾವೇ ಅವರಿಗೆ ತಕ್ಕ ಶಾಸ್ತಿ ಮಾಡಲೆಂದೇ ಇಲ್ಲಿಗೆ ಬಂದಿರುವದಾಗಿಯೂ ಸಂಘಟನೆ ತಿಳಿಸಿದೆ.
ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವರಾದ ಚಂದ್ರಕಾಂತ ಪಾಟೀಲ ಮತ್ತು ಶಂಭುರಾಜೆ ದೇಸಾಯಿ “ನಾವು ಬೆಳಗಾವಿಗೆ ಬಂದೇ ಬರುತ್ತೇವೆ, ಯಾವ ಶಕ್ತಿಯೂ ತಮ್ಮನ್ನು ತಡೆಯಲು ಸಾಧ್ಯವಿಲ್ಲ” ಎಂದು ಮುಂಬಯಿಯಲ್ಲಿ ಕಳೆದವಾರ ಹೇಳಿದ್ದರು. ಮಂಗಳವಾರ (ಡಿ 6) ರಂದು ಅವರ ಬೆಳಗಾವಿ ಭೇಟಿಯ ಕಾರ್ಯಕ್ರಮವಿದೆ.
ಕನ್ನಡ ಧ್ವಜ ಹಿಡಿದು ಕುಣಿದು ಸಂಭ್ರಮಿಸಿದ ಕನ್ನಡ ವಿದ್ಯಾರ್ಥಿ ಮೇಲೆ ಬೆಳಗಾವಿ ಪೊಲೀಸರು ನಡೆಸಿದ
ಹಲ್ಲೆ, ಅವಮಾನ ಪ್ರಕರಣವನ್ನು ಉಲ್ಲೇಖಿಸಿದ ಸಂಘಟನೆಯು ಕರ್ನಾಟಕದಲ್ಲಿ ಕನ್ನಡ ಪರ ಹೋರಾಟಗಾರರನ್ನು ದಮನ ಮಾಡುವ ವ್ಯವಸ್ಥಿತ ಸಂಚು ಸರಕಾರದ ಮಟ್ಟದಲ್ಲಿ ನಡೆದಿದೆ. ಇದಕ್ಕೆ ಬೆಳಗಾವಿಯ ವಿದ್ಯಾರ್ಥಿ ಜೊತೆ ಹಿರಿಯ ಪೊಲೀಸ್ ಅಧಿಕಾರಿ ನಡೆದುಕೊಂಡ ರೀತಿಯೇ ಸಾಕ್ಷಿ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಆಗುತ್ತಿರುವ ನಿರಂತರ ಅವಮಾನಕ್ಕೆ ಸರಕಾರವೇ ಕಾರಣ. ಕರ್ನಾಟಕ ಏಕೀಕರಣ ಸಮಿತಿ ಕನ್ನಡಿಗರ ವಿರುದ್ಧ ನಡೆಯುವ ಹಿಂಸೆ, ದೌರ್ಜನ್ಯದ ವಿರುದ್ಧ ಹೋರಾಟ ಮುಂದುವರೆಸಲಿದೆ ಎಂದು ತಿಳಿಸಿದೆ.
ಗಡಿ ವಿವಾದ ಸುಪ್ರೀಮ ಕೋರ್ಟ ಅಂಗಳದಲ್ಲಿದ್ದು , ಉಭಯ ಭಾಷಿಕರೂ ಸಹಬಾಳ್ವೆ ನಡೆಸುತ್ತಿರುವಾಗ ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ಯಾಕೆ, ಅವರ ಭೇಟಿಯಿಂದ ಸ್ನೇಹ ಸೌಹಾರ್ದತೆಗೆ ಧಕ್ಕೆಯುಂಟಾಗಲಿದೆ, ಹಾಗಾಗಿ ಅವರ ಭೇಟಿ ನಿಷೇಧಿಸಬೇಕು ಎಂದು ಸಂಘಟನೆಯ ಸದಸ್ಯರು ಆಗ್ರಹಿಸಿದರು.
ಕನ್ನಡ ವಿದ್ಯಾರ್ಥಿಯೊಂದಿಗಿನ ದೌರ್ಜನ್ಯ ಮತ್ತು ಮಹಾರಾಷ್ಟ್ರ ಸರಕಾರದ ನಡೆಯನ್ನು ಬೆಳಗಾವಿಯ ಯಾರೊಬ್ಬ ಜನಪ್ರತಿನಿಧಿಗಳು ಧ್ವನಿಯೆತ್ತದಿರುವದು ಯಾಕೆ ಎಂದು ಪ್ರಶ್ನಿಸಿರುವ ಸಂಘಟನೆ, ಬರುವ ಚುನಾವಣೆಯಲ್ಲಿ ಕನ್ನಡಿಗರ ಹಿತರಕ್ಷಣೆಗೆ ಆದ್ಯತೆ ಕೊಡುವವರನ್ನೇ ಆಯ್ಕೆ ಮಾಡಲು ಕನ್ನಡಿಗರನ್ನು ವಿನಂತಿ ಮಾಡಿಕೊಂಡಿದೆ.