ಬೈಲಹೊಂಗಲ : 2021-22 ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಪಟ್ಟಣದ ವಿದ್ಯಾನಗರದ ಮಲ್ಲೇಶಪ್ಪ ಯರಗುದ್ದಿ ಅವರ ಮಗಳು ನಿಸರ್ಗಾ 720 ಕ್ಕೆ 685 ಅಂಕ ಪಡೆದು ದೇಶಕ್ಕೆ 611 ನೇ ರ್ಯಾಂಕ ಪಡೆದಿದ್ದಾರೆ
ಕಿತ್ತೂರು ರಾಣಿ ಚೆನ್ನಮ್ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶಿಕ್ಷಣವನ್ನು ಪೂರೈಸಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.96 ಅಂಕ ಪಡೆದು ಎಐಎಂ ಇಂಟಿಗ್ರೆಟೆಡ್ ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 94 ಅಂಕ ಪಡೆದು, ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಪ್ರಾಥಮಿಕ ಹಂತದಿಂದ ನಿಸರ್ಗಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ನೀಟ್ ಪರೀಕ್ಷೆಗೆ ದಿನದ 12 ಗಂಟೆಗಳ ಕಾಲ ಅಧ್ಯಯನಕ್ಕೆ ಮೀಸಲಿಟ್ಟಿದ್ದರು ಎಂದು ತಿಳಿಸಿದರು.
ತಮ್ಮ ಯಶಸ್ಸಿಗೆ ಶಿಕ್ಷಕರು, ತಂದೆ ತಾಯಂದಿರ ಪ್ರೇರಣೆ ಕಾರಣವಾಗಿದ್ದು, ಮುಂದೆ ಎಂಬಿಬಿಎಸ್ ಮತ್ತು ಎಂ ಡಿ ಮಾಡುವ ಅಪೇಕ್ಷೆ ಹೊಂದಿದ್ದು ಗ್ರಾಮೀಣ ವಲಯದಲ್ಲಿ ಸೇವೆ ಮಾಡಲು ಬಯಸಿರುವದಾಗಿ ತಿಳಿಸಿದರು.
ಯುವ ವಿದ್ಯಾರ್ಥಿಗಳಿಗೆ ಅದರಲ್ಲೂ ನೀಟ್ ಮತ್ತು ಉನ್ನತ ದರ್ಜೆಯ ನೌಕರಿಗೆ ಸೇರ ಬಯಸುವವರು ಹಿಂದಿನ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಮತ್ತು ಅದರ ಸರಿಯಾದ ಮಾದರಿ ಉತ್ತರ ಪತ್ರಿಕೆ ಅಭ್ಯಸಿಸಿದರೆ ಹೆಚ್ಚಿನ ಪ್ರಯೋಜನ ಪಡೆಯಬಹುದೆಂದು ತಿಳಿಸಿದರು.
ಅಭ್ಯಾಸ ಬಿಟ್ಟು ಇತರೆಡೆ ಸೆಳೆಯುವ ವಿಷಯಗಳ ಕುರಿತು ಗಮನ ನೀಡದೆ, ಅಧ್ಯಯನದ ಕಡೆಗೇ ಗಮನ ನೀಡಿದರೆ ಯಾವುದೇ ಸಾಧನೆ ಮಾಡಬಹುದು. ದೂರದ ಊರಿನಲ್ಲಿ ಕಲಿಕೆಗೆ ಆಸಕ್ತಿ ವಹಿಸದೆ ತಾವಿರುವ ಸ್ಥಳಗಳಲ್ಲಿ ಅಧ್ಯಯನ ಮಾಡುವುದರ ಜತೆ ಶಿಕ್ಷಕರ ಮಾರ್ಗದರ್ಶನ ಪಡೆದು ಅತ್ಯುತ್ತಮ ಸಾಧನೆ ಮಾಡಬಹುದು ಎಂದರು.
ನೀಟ್ ಪರೀಕ್ಷೆಯಲ್ಲಿ ಮಗಳು ನಿಸರ್ಗಾ ಸಾಧನೆಗೆ ಅವರ ತಂದೆ ಮಲ್ಲೇಶಪ್ಪ, ತಾಯಿ ಕಲಾವತಿ ಹಾಗೂ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಪಟ್ಟರು.