ಬೆಳಗಾವಿ, ಜೂನ್ ೨೧: ಆರ್ಡರ್ ಮಾಡಿದ್ದ ಬಿರಿಯಾನಿ ಸರಿಯಾದ ಸಮಯಕ್ಕೆ ತಲುಪಲಿಲ್ಲವೆಂಬ ಕಾರಣಕ್ಕೆ ಹೊಡೆದಾಟವಾಗಿ ಇಬ್ಬರು ಜೈಲಿಗೆ ಇನ್ನಿಬ್ಬರು ಆಸ್ಪತ್ರೆಗೆ ಹೋದ ಪ್ರಕರಣ ಗುರುವಾರ ರಾತ್ರಿ ಗಾಂಧಿ ನಗರದಲ್ಲಿ ನಡೆದಿದೆ.
ಯಮುನಾಪುರದ ದಡ್ಡಿ ಕುಟುಂಬದವರ ಮಗ ಸಚಿನ ದಡ್ಡಿ ಎಂಬವರ ಹುಟ್ಟುಹಬ್ಬವಿತ್ತು, ಹಾಗಾಗಿ ಸಂಬಂಧಿಕರನ್ನು, ಆಪ್ತರನ್ನು ರಾತ್ರಿ ಊಟಕ್ಕೆ ಆಮಂತ್ರಿಸಿ, ಗಾಂಧಿ ನಗರದ ಸಲೀಮ ನದಾಫ ಎಂಬವರಿಗೆ 200 ಜನರಿಗೆ ಆಗುವಷ್ಟು ಚಿಕನ್ ಬಿರ್ಯಾನಿ ಆರ್ಡರ್ ಮಾಡಿ ರಾತ್ರಿ 8 ಗಂಟೆಗೆ ಕಳುಹಿಸಲು ಸೂಚಿಸಿದ್ದರು. ಆದರೆ ರಾತ್ರಿ 10 ಗಂಟೆಯದರೂ ಊಟ ಬಾರದಿದ್ದರಿಂದ ಕೆಲವರು ಗಾಂಧಿ ನಗರಕ್ಕೆ ತೆರಳಿದ್ದಾರೆ. ಆದರೆ ಆಗ ಅಡುಗೆ ಇನ್ನೂ ಸಿದ್ದವಾಗುತ್ತಿರುವುದನ್ನು ಕಂಡು ಕೋಪಗೊಂಡು ಜಗಳವಾಡಿದ್ದಾರೆ, ಅದು ವಿವಾದಕ್ಕೆ ತಿರುಗಿ ಹೊಡೆದಾಟವಾಗಿದೆ.
ಇದರಲ್ಲಿ ಮುಸ್ತಾಕ ಸೈಯದ ಮತ್ತು ಆಫ್ಜಲ್ ಸೈಯ್ಯದ ಗಾಯಗೊಂಡು ಆಸ್ಪತ್ರೆ ಸೇರಿದರೆ, ಹೊಡೆದ ಯಮನಾಪುರದ ಹೋಳಿ ಗಲ್ಲಿಯ ವಿಷ್ಣು ಗಸ್ತಿ ಮತ್ತು ಬಾಲರಾಜ ಹಳಬರ ಜೈಲು ಸೇರಿದ್ದಾರೆ.
ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.