ಮಂಗಳೂರು : ‘ರಸ್ತೆ, ಮೋರಿ, ಚರಂಡಿ, ಅಭಿವೃದ್ಧಿಯಂತಹ ಸಣ್ಣಪುಟ್ಟ ವಿಚಾರಗಳ ಬಗ್ಗೆ ಮಾತನಾಡಬೇಡಿ; ಲವ್ ಜಿಹಾದ್ ನಿಲ್ಲಿಸಬೇಕಿದ್ದರೆ ಭಾರತೀಯ ಜನತಾ ಪಾರ್ಟಿಯನ್ನು ಅಧಿಕಾರಕ್ಕೆ ತನ್ನಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ನೀಡಿರುವ ಹೇಳಿಕೆ ಈಗ ರಾಷ್ಟ್ರ ಮಟ್ಟದಲ್ಲಿ ವಿವಾದ ಹುಟ್ಟುಹಾಕಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ಅತ್ಯಗತ್ಯ ಮೂಲ ಸೌಕರ್ಯಗಳ ಬಗ್ಗೆ ಮಾತನಾಡುವುದು ಬಿಟ್ಟು ಪ್ರಚೋದನಕಾರಿಯಾಗಿ ಹೇಳಿಕೆ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ.
ಕಟೀಲ್ ಮಾತನಾಡಿರುವ ವಿಡಿಯೋದಲ್ಲಿ ಏನಿದೆ?
“ರಸ್ತೆ, ಮೋರಿ, ಚರಂಡಿಯಂತಹ ಸಣ್ಣಪುಟ್ಟ ವಿಚಾರಗಳ ಬಗ್ಗೆ ಮಾತನಾಡಬೇಡಿ; ವೇದವ್ಯಾಸ ಕೈ ಎತ್ತಿಲ್ಲ, ನಳಿನಕುಮಾರ್ ಕಟೀಲ್ ನಕ್ಕಿಲ್ಲ, ನಳಿನಕುಮಾರ್ ನಕ್ಕರೆ ನಿಮಗೇನು ಬಂಗಾರ ಸಿಗಲ್ಲ. ನಿಮ್ಮ ಮಕ್ಕಳ ಬದುಕಿನ ಪ್ರಶ್ನೆ ಲವ್ ಜಿಹಾದ್… ಅದನ್ನು ನಿಲ್ಲಿಸಬೇಕಿದ್ದರೆ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರಬೇಕು” ಎಂದು ಕಟೀಲ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
“2014 ನಂತರ ಈ ದೇಶದಲ್ಲಿ ಎಲ್ಲಿಯೂ ಬಾಂಬ್ ಬ್ಲಾಸ್ಟ್ ಆಗಿಲ್ಲ, ಅದು ನರೇಂದ್ರ ಮೋದಿ ತಾಕತ್ತು. ನಮ್ಮ ಮಕ್ಕಳು ಶಾಲೆಗೆ ಹೋದವರು ಮತ್ತೆ ಮನೆಗೆ ಬರಬೇಕಲ್ಲವೇ? ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕರಾವಳಿ ಆತಂಕದಲ್ಲಿದೆ. ಆತಂಕ ನಿವಾರಣೆಗೆ ಒಂದೇ ದಾರಿ; ಅದು ಅಮಿತ ಶಾ ಹಾಗೂ ನರೇಂದ್ರ ಮೋದಿ, ಕರ್ನಾಟಕದಲ್ಲಿ ಬೊಮ್ಮಾಯಿ” ಎಂದು ಹೇಳಿದ್ದಾರೆ.
“ನಾವು ನಮ್ಮ ತಾಕತ್ತು ತೋರಿಸುತ್ತಿದ್ದೇವೆ; ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದು ಬೊಮ್ಮಾಯಿ ಸರ್ಕಾರ. ಲವ್ ಜಿಹಾದ್ ಕಾಯ್ದೆಯನ್ನು ನಿಷೇಧಿಸಿ ಕಾನೂನು ತರೋದು ಕೂಡಾ ನಮ್ಮದೇ ಸರ್ಕಾರ” ಎಂದು ಕಟೀಲ್ ಹೇಳಿದ್ದಾರೆ.
ಕಟೀಲ್ ಹೇಳಿಕೆಯನ್ನು ಉಲ್ಲೇಖಿಸಿ ಹಿರಿಯ ಪತ್ರಕರ್ತ ರಾಜದೀಪ ಸರ್ದೇಸಾಯಿ ಸೇರಿದಂತೆ ಹಲವರು ಟ್ವೀಟ್ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ತನ್ನ ವೈಫಲ್ಯಗಳನ್ನು ಮತ್ತು ಭ್ರಷ್ಟಾಚಾರವನ್ನು ಮರೆಮಾಚಲು ಬಳಸುವುದು ಕೋಮು ಕಲಹವನ್ನು. ರಾಜ್ಯದ ಅಭಿವೃದ್ಧಿ, ಉದ್ಯೋಗ, ಶಿಕ್ಷಣದ ವಿಷಯಗಳು ಬಿಜೆಪಿಗೆ “ಸಣ್ಣ ವಿಷಯಗಳು”! ಹೇಳಿಕೊಳ್ಳಲು ಅಭಿವೃದ್ಧಿಪರ ಸಾಧನೆಗಳಿಲ್ಲದ ಬಿಜೆಪಿ ಅವುಗಳ ಬಗ್ಗೆ ಮಾತೇ ಆಡಬೇಡಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ” ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.