ಬೆಳಗಾವಿ : ರಾಜ್ಯದಲ್ಲಿ ಬಿಜೆಪಿ ಪಕ್ಷ ಹುಟ್ಟಿರುವುದೇ ಅಕ್ರಮದಿಂದ ಮತ್ತು ಭ್ರಷ್ಟಾಚಾರದಿಂದ. ಮುಂಬೈಯಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಇರಿಸಿ, ಅವರು ತಪ್ಪು ಮಾಡುವಂತೆ ಮಾಡಿ ಅದರ ವಿಡಿಯೋ ರೆಕಾರ್ಡ್ ಮಾಡಿ ನಂತರ ಬ್ಲಾಕ್ಮೇಲ್ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ ರಾವ ಆರೋಪಿಸಿದರು.
ಬೆಳಗಾವಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಕೆಂಪು ಕೋಟೆ ಮೇಲೆ ನಿಂತು ಭ್ರಷ್ಟಾಚಾರ ವಿರುದ್ಧ ಮಾತನಾಡುವ ಪ್ರಧಾನಿ ಮೋದಿ ತಾವು ಯಾವುದೇ ಕಾರಣಕ್ಕೂ ಭ್ರಷ್ಟಾಚಾರಕ್ಕೆ ಆಸ್ಪದ ನೀಡುವದಿಲ್ಲ. ನಾನೂ ತಿನ್ನಲ್ಲ, ತಿನ್ನಲೂ ಕೊಡುವದಿಲ್ಲವೆಂದಿದ್ದರು. ಕರ್ನಾಟಕದಲ್ಲಿ ಇಷ್ಟೆಲ್ಲ ಭ್ರಷ್ಟಾಚಾರ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಕಣ್ಮುಚ್ಚಿ ಕುಳಿತಿದ್ದಾರೆ ಎಂದರು.
ಕಾಮಗಾರಿಯ ಬಿಲ್ ಮಂಜೂರು ಮಾಡಲು ಸಚಿವ ಕೆ. ಎಸ್. ಈಶ್ವರಪ್ಪ 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರಿಗೆ ಹಲವು ಬಾರಿ ಪತ್ರ ಬರೆದರೂ ಯಾವುದೇ ಪ್ರಯೋಜನ ಆಗಿಲ್ಲ. ಇದೀಗ 50 ಪರ್ಸೆಂಟ್ ಸರ್ಕಾರ ಎಂದು ಕೇಂದ್ರ ಸರ್ಕಾರಕ್ಕೆ ಮತ್ತೆ ಗುತ್ತಿಗೆದಾರರು ಪತ್ರ ಬರೆಯಲು ಮುಂದಾಗಿದ್ದಾರೆ ಎಂದರು.
ರಾಜ್ಯ ಸರ್ಕಾರದಲ್ಲಿ ಶೇ.40 ಅಲ್ಲ ಶೇ.50ರಷ್ಟು ಭ್ರಷ್ಟಾಚಾರ ನಡೆಯುತ್ತಿರುವ ವಿಚಾರವನ್ನು ಗುತ್ತಿಗೆದಾರರೇ ಆರೋಪಿಸಿದ್ದಾರೆ. ಇನ್ನು ಪಿಎಸ್ಐ ನೇಮಕಾತಿಯಲ್ಲಿ ಮತ್ತು ಶಿಕ್ಷಣ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಇದರಿಂದ ಸಾವಿರಾರು ಪರೀಕ್ಷಾರ್ಥಿಗಳ ಭವಿಷ್ಯ ಅತಂತ್ರವಾಗಿದೆ ಎಂದು ಅವರು ಹೇಳಿದರು.
ಕೊರೋನಾ ಸಂದರ್ಭದಲ್ಲಿ ಆರೋಗ್ಯ ಸಚಿವರ ಮೇಲೂ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಸಚಿವ ಮುನಿರತ್ನ ಅವರ ಕುರಿತೂ ಗಂಭೀರವಾದ ಭ್ರಷ್ಟಾಚಾರದ ಆರೋಪಗಳಿವೆ ಎಂದರು.
ಪ್ರಧಾನಿ ಮೋದಿ ಅವರು ಪತ್ರಕರ್ತರ ಮುಂದೆ ಬರಲು ಹೆದರುತ್ತಾರೆ. ಅವರು ಪ್ರಧಾನಿಯಾಗಿ ಎಂಟು ವರ್ಷಗಳಾದರೂ ಪತ್ರಿಕಾಗೋಷ್ಠಿ ನಡೆಸಿಲ್ಲ. ಈ ಹಿಂದೆ ಬಿಟಕಾಯಿನ್ ಹಗರಣ ಸದ್ದು ಮಾಡಿತ್ತು. ಇದರಲ್ಲಿ ಮಾಜಿ ಮುಖ್ಯಮಂತ್ರಿ ಪುತ್ರನ ವಿರುದ್ಧ ಆರೋಪಗಳು ಕೇಳಿ ಬಂದವು. ಈ ಪ್ರಕರಣದಲ್ಲಿ ಪ್ರಧಾನಮಂತ್ರಿ ಯಾರ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದ ಭಾಸ್ಕರ ರಾವ, ತಾವು ಬೆಂಗಳೂರಿನ ಪೊಲೀಸ್ ಕಮೀಷನರ್ ಆಗಿದ್ದಾಗ ಬಿಟಕಾಯಿನ್ ಹಗರಣ ಆಗಿಲ್ಲ. ತಮ್ಮ ನಂತರ ಈ ಬಿಟಕಾಯಿನ್ ಹಗರಣ ನಡೆದಿದೆ ಎಂದರು.
ಬೊಮ್ಮಾಯಿ ಸರಕಾರದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳು ಮೂಕ ಪ್ರೇಕ್ಷರಾಗಿದ್ದಾರೆ. ಬಿಟ್ಕ್ವಾಯಿನ್ ವಿಚಾರದಲ್ಲಿ ಒಬ್ಬರನ್ನೂ ಇನ್ನೂವರೆಗೆ ಯಾಕೆ ಬಂಧಿಸಿಲ್ಲ ಎಂದು ಅವರು ಪ್ರಶ್ನಿಸಿದರು.
ಸರ್ಕಾರ ಹಲವಾರು ಹಗರಣಗಳಲ್ಲಿ ಮುಳುಗಿದೆ. ರಾಜ್ಯವನ್ನು ಕೇಸರಿಕರಣ ಮಾಡಲು ಮುಂದಾಗಿದ್ದಾರೆ. ಆದರೆ ಸಂಪೂರ್ಣವಾಗಿ ಕೇಸರಿಕರಣ ಮಾಡಲು ಇವರಿಗೆ ಧೈರ್ಯ ಇಲ್ಲ. ಅವರ ಕಾರ್ಯಕರ್ತರೇ ಅವರ ಮೈಮೇಲೆ ಬಿದ್ದಿದ್ದಾರೆ. ಸುಮ್ಮನೆ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸೊಶಿಯಲ್ ಮೀಡಿಯಾ ಪೈಲವಾನ್ಗಳು ಇವರು. ಕೆಲ ಸೋಶಿಯಲ್ ಮಿಡಿಯಾ ಪುಂಡರನ್ನು ಬೆಳೆಸಿದ್ದಾರೆ. ಅವರ ಮೂಲಕ ಬಿಜೆಪಿಗರು ಆಟ ಆಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಮುರುಘಾ ಶರಣರ ವಿರುದ್ಧದ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಅತ್ಯಾಚಾರ ಪ್ರಕರಣದ ಕುರಿತು ಮಾತನಾಡಿದ ಅವರು, ಇದು ಅತ್ಯಂತ ಆಘಾತಕಾರಿ ವಿಷಯ. ಸ್ವಾಮೀಜಿ ಬಗ್ಗೆ ಕರ್ನಾಟಕದಲ್ಲಿ ಬಹಳ ಗೌರವವಿದೆ. ಅದೇ ರೀತಿ ಮಕ್ಕಳ ಮೇಲಿನ ಅನ್ಯಾಯದ ಬಗ್ಗೆಯೂ ಸಾಕಷ್ಟು ಬೇಸರ ಆಗಿದೆ. ಹೀಗಾಗಿ ಇಬ್ಬರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ. ತನಿಖಾ ಸಂಸ್ಥೆ ಸರ್ಕಾರದ ಆದೇಶದಂತೆ ಕೆಲಸ ಮಾಡಬೇಕಾಗುತ್ತದೆ ಎಂದರು.
ತಮಗೆ ಪೊಲೀಸರ ಮೇಲೆ ನನಗೆ ವಿಶ್ವಾಸವಿದೆ. ಮುಕ್ತ ತನಿಖೆ ಮಾಡಲು ಪೊಲೀಸರಿಗೆ ಅವಕಾಶ ಕೊಟ್ಟರೆ ಒಳ್ಳೆಯದು ಎಂದು ಹೇಳಿದರು.
ನಮ್ಮ ರಾಜ್ಯದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಾ, ಸಂಗೊಳ್ಳಿ ರಾಯಣ್ಣ, ಕೆಂಪೇಗೌಡರ ಭಾವಚಿತ್ರವನ್ನು ಇಡಬೇಕು ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜಕುಮಾರ ಟೋಪಣ್ಣವರ ಇನ್ನಿತರ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.