ಕಾರವಾರ, 11: ಸಂಸದ ಅನಂತಕುಮಾರ ಹೆಗಡೆ ಅವರು ಈಚೆಗೆ ನೀಡಿರುವ ಸಂವಿಧಾನ ಬದಲಿಸುವ ಹೇಳಿಕೆಯಿಂದ ಲೋಕಸಭೆ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಂಭವವಿರುವುದರಿಂದ ರಾಜ್ಯ ಬಿಜೆಪಿಯೇ ಬಿಜೆಪಿ ಸಂಸದರ ಹೇಳಿಕೆಗೆ ಸಮ್ಮತಿ ನೀಡಿಲ್ಲ.
ಈ ಕುರಿತು ‘ಎಕ್ಸ ನಲ್ಲಿ’ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಘಟಕವು ಅನಂತಕುಮಾರ ಹೆಗಡೆ ಅವರ ಸಂವಿಧಾನದ ಬಗೆಗಿನ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳೇ ಹೊರತು ಪಕ್ಷದ ನಿಲುವನ್ನು ಬಿಂಬಿಸುವುದಿಲ್ಲ, ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ. ಬಿಜೆಪಿ ರಾಷ್ಟ್ರದ ಸಂವಿಧಾನವನ್ನು ಎತ್ತಿಹಿಡಿಯುವ ಅಚಲವಾದ ಬದ್ಧತೆಯನ್ನು ಹೊಂದಿದೆ. ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಪಕ್ಷ ಸೂಚಿಸಿದೆ ಎಂದು ತಿಳಿಸಿದೆ.
ಅನಂತಕುಮಾರ ಹೆಗಡೆ ಹೇಳಿದ್ದೇನು?
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಲಗೇರಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ಸಂವಿಧಾನ ಬದಲಾವಣೆ ಮಾಡುವುದಾದರೆ ಬಹುಮತ ಅವಶ್ಯ, ಕಾಂಗ್ರೆಸ್‌ನವರು ಸಂವಿಧಾನದ ಮೂಲರೂಪವನ್ನು ತಿರುಚಿದ್ರು, ಅದರಲ್ಲಿ ಬೇಡದೇ ಇರೋದನ್ನೆಲ್ಲ ತುರುಕಿದ್ರು, ಇಡೀ ಹಿಂದೂ ಸಮಾಜವನ್ನ ದಮನಿಸುವ ರೀತಿ ಕಾನೂನು ತಂದಿಟ್ಟಿದ್ದರು. ಇದೆಲ್ಲವೂ ಬದಲಾಗಬೇಕಿದ್ದರೇ ಈ ಅಲ್ಪಮತದಲ್ಲಿ ಆಗುವುದಿಲ್ಲ, ಎರಡೂ ಕಡೆ 2/3 ಬಹುಮತ ಬೇಕಾಗುತ್ತೆ. ಕಾಂಗ್ರೆಸ್‌ನವರು ಜಾಸ್ತಿ ಆದಾಗ ಏನೇ ತಿದ್ದುಪಡಿ ತರೋದಿದ್ರೂ ರಾಜ್ಯಸಭೆಯಲ್ಲಿ ಪಾಸ್ ಆಗಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದ್ದರು.