ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಎಲ್ಲಾ ದಂಗೆ, ಕೊಲೆಗಳಿಗೆ ಭಾರತೀಯ ಜನತಾ ಪಕ್ಷವೇ ನೇರ ಹೊಣೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಶಿವಮೊಗ್ಗದ ಜಿಲ್ಲೆಯವರೇ ಗೃಹ ಸಚಿವರಾಗಿದ್ದರು. ಆದರೂ ಯಾಕೆ ದಂಗೆಗಳನ್ನು ಕಂಟ್ರೋಲ್ ಮಾಡಲಿಲ್ಲ? ಎಲ್ಲಾ ದಂಗೆ, ಕೊಲೆಗಳಿಗೆ ಬಿಜೆಪಿಯೇ ನೇರ ಹೊಣೆ ಎಂದು ಹೇಳಿದರು.
ರಾಜ್ಯದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಗಲಾಟೆಗಳು ಬಿಜೆಪಿ ಇದ್ದಾಗಲೇ ನಿಯಂತ್ರಣಕ್ಕೆ ಬರಲಿಲ್ಲ. ಇನ್ನು ಕಾಂಗ್ರೆಸ್ ಬಂದ ಮೇಲೆ ಇದು ಇನ್ನಷ್ಟು ಹೆಚ್ಚಾಗುತ್ತವೆ. ಬಿಜೆಪಿ ಮಾಡಿದ ತಪ್ಪಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಅಷ್ಟೇ ಎಂದು ಟೀಕಿಸಿದರು.
ಕಾಂಗ್ರೆಸ್ 1984ರಲ್ಲಿಯೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿತ್ತು. ಬಿಜೆಪಿ ಅದನ್ನು ಸ್ವಲ್ಪ ಬದಲಾವಣೆ ಮಾಡಿತ್ತು ಅಷ್ಟೇ. ನೀವೇ ಕಾಯ್ದೆ ಮಾಡಿ, ಈಗ ವಿರೋಧ ಮಾಡುತ್ತಿರುವುದು ಸರಿನಾ? ಎಂದು ಮುತಾಲಿಕ ಪ್ರಶ್ನಿಸಿದ್ದಾರೆ.
ಗೋ ಹತ್ಯೆ ವಿಚಾರವಾಗಿ ಅಧಿವೇಶನದಲ್ಲಿ ಸರ್ಕಾರ ಯಾವ ನಿಲುವು ಕೈಗೊಳ್ಳೊತ್ತೋ ಕಾದು ನೋಡೋಣ. ಒಂದು ವೇಳೆ ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದರೆ ಹಿಂದೂ ಸಂಘಟನೆಗಳಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.