ಬಿಜೆಪಿ ಶಾಸಕ ಯತ್ನಾಳ ಸಕ್ಕರೆ ಕಾರ್ಖಾನೆಗೆ ಬೀಗ

A B Dharwadkar
ಬಿಜೆಪಿ ಶಾಸಕ ಯತ್ನಾಳ ಸಕ್ಕರೆ ಕಾರ್ಖಾನೆಗೆ ಬೀಗ

ಬೆಂಗಳೂರು, 27: ಪರಿಸರ ನಿಯಮಾವಳಿಗಳನ್ನು ಉಲ್ಲಂಘಿಸಿದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರದೂ ಸೇರಿದಂತೆ ಎರಡು ಸಕ್ಕರೆ ಕಾರ್ಖಾನೆಗಳನ್ನು ಮುಚ್ಚಲು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಆದೇಶಿಸಿದೆ.

ಶಾಸಕ ಯತ್ನಾಳ‌ ಒಡೆತನದ ಕಲಬುರಗಿ ಜಿಲ್ಲೆ ಚಿಂಚೋಳಿಯ ಸಿದ್ಧಶ್ರೀ ಸೌಹಾರ್ದ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಇತ್ತೀಚಿಗೆ ವಿಷಾನಿಲ ಸೋರಿಕೆಯಿಂದ ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾದ ಬೀದರ‌ ಜಿಲ್ಲೆ ಹುಮನಾಬಾದ್‌ನ ಪ್ರಸನ್ನ ಪ್ರಿ ಪ್ರೊಸೆಸಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಾರ್ಖಾನೆಗಳನ್ನು ತಕ್ಷಣದಿಂದಲೇ ಮುಚ್ಚುವಂತೆ ಸೂಚಿಸಲಾಗಿದೆ.

ಕಳೆದ ವಾರ ಪರಿಸರ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಕೆಎಸ್‌ಪಿಸಿಬಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ‌ ಸೂಚನೆ ನೀಡಿದ ಬೆನ್ನಲ್ಲೇ ತುರ್ತು ಸಭೆ ನಡೆಸಿದ ಮಂಡಳಿಯು ಸಕ್ಕರೆ ಕಾರ್ಖಾನೆಗಳನ್ನು ಮುಚ್ಚುವಂತೆ ನೋಟಿಸ್ ಜಾರಿಗೊಳಿಸಿದೆ ಎಂದು ವರದಿಗಳು ಹೇಳಿವೆ.

ಸಕ್ಕರೆ ಕಾರ್ಖಾನೆಗಳಿಗೆ ಬೀಗ ಜಡಿಯುವುದು ಮಾತ್ರವಲ್ಲದೇ ಅವುಗಳ ನೋಂದಣಿಗೆ ಸಹಕರಿಸಿದ ಅಧಿಕಾರಿಗಳ ವಿರುದ್ದವೂ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೆಎಸ್‌ಪಿಸಿಬಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಎರಡು ಕಾರ್ಖಾನೆಗಳಲ್ಲಿ ಅವೈಜ್ಞಾನಿಕ ನಿರ್ವಹಣೆ ಸೇರಿದಂತೆ ಹಲವು ಲೋಪಗಳು ಕಂಡು ಬಂದಿವೆ ಎಂದು ಹೇಳಲಾಗಿದೆ.

ಯತ್ನಾಳ ಸಕ್ಕರೆ ಕಾರ್ಖಾನೆ
————————

ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ‌ ಯತ್ನಾಳ‌ ಒಡೆತನದ ಸಿದ್ಧಶ್ರೀ ಸೌಹಾರ್ದ ಸಹಕಾರಿ ಸಕ್ಕರೆ ಕಾರ್ಖಾನೆ ಮಾಲಿನ್ಯ ನಿಯಂತ್ರಣ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಾರ್ಖಾನೆ ನಡೆಸುತ್ತಿದ್ದ ಆರೋಪ ಕೇಳಿ ಬಂದಿದೆ. ವರದಿಗಳ ಪ್ರಕಾರ, ಅನುಮತಿ ಪಡೆಯದೇ ಬಾಯ್ಲರ್ ಆರಂಭ, ಕಬ್ಬು ಅರೆಯುವಿಕೆ, ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಹಂತದಲ್ಲಿದ್ದರೂ ಅನುಮತಿ ಪಡೆಯದೇ ಡಿಸ್ಟಿಲರಿ ಘಟಕ ಸ್ಥಾಪಿಸಿದ್ದು ಸೇರಿದಂತೆ ಅನೇಕ ಆರೋಪಗಳು ಈ ಕಾರ್ಖಾನೆ ವಿರುದ್ದ ಕೇಳಿ ಬಂದಿವೆ.

ಹುಮನಾಬಾದ ಕಾರ್ಖಾನೆ
———————

ಜನವರಿ 21ರಂದು ವಿಷಾನಿಲ ಸೋರಿಕೆಯಿಂದ ದುರ್ಘಟನೆ ನಡೆದಿರುವ ಬೀದರ ಜಿಲ್ಲೆ ಹುಮನಾಬಾದ‌ ತಾಲೂಕಿನ ಗಡ್ವಂತಿ ಗ್ರಾಮದ ಕೆಐಎಡಿಬಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸನ್ನ ಪ್ರಿ ಪ್ರೊಸೆಸಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಾರ್ಖಾನೆಯನ್ನು ಮುಂದಿನ ಆದೇಶದ ವರೆಗೆ ಸ್ಥಗಿತಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ಕಾರ್ಖಾನೆ ಮುಚ್ಚಲು ಇತ್ತೀಚೆಗೆ ನಡೆದ ದುರ್ಘಟನೆ ಮತ್ತು ನಿಯಮಾವಳಿಗಳ ಉಲ್ಲಂಘನೆ ಮುಖ್ಯ ಕಾರಣ ಎನ್ನಲಾಗಿದೆ.

ನೋಟೀಸ

ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು 2023ರಿಂದ ಈ ವರೆಗೆ ರಾಜ್ಯದಲ್ಲಿ ಎಷ್ಟು ಕೈಗಾರಿಕೆಗಳು, ಕಲ್ಲು ಮತ್ತು ಅದಿರು ಗಣಿಗಳಿಗೆ ನೋಟಿಸ್‌ ನೀಡಲಾಗಿದೆ. ಅವುಗಳಲ್ಲಿ ಎಷ್ಟು ನೋಟಿಸ್‌ಗೆ ಉತ್ತರ ನೀಡಿವೆ. ಎಷ್ಟು ಕಾರ್ಖಾನೆಗಳು ಮತ್ತು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಒಂದು ವಾರದಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.