ಹುಬ್ಬಳ್ಳಿ : ಕಾಂಗ್ರೆಸ್ ನ ಭಾರತ ಜೋಡೋ ಯಾತ್ರೆಗೆ ಸಿಗುತ್ತಿರುವ ವ್ಯಾಪಕ ಜನ ಬೆಂಬಲದಿಂದ ಅಘಾತಗೊಂಡು ರಾಜ್ಯ ಬಿಜೆಪಿ ಆರಂಭಿಸಿರುವ ಸಂಕಲ್ಪ ಯಾತ್ರೆ ಸಂಪೂರ್ಣ ವಿಫಲಗೊಂಡಿದ್ದು ಅದೊಂದು ಪ್ಲಾಫ್ ಶೋ ಆಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಕಲ್ಪ ಯಾತ್ರೆಗೆ ಜನರೇ ಸೇರುತ್ತಿಲ್ಲ, ಬಂದ ಕೆಲವೇ ಕೆಲವರು ಮಧ್ಯದಲ್ಲೇ ತೇರಳದಂತೆ ಅವರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಯಾತ್ರೆಯ ಸಭೆಗಳಿಗೆ ಬಂದವರು ತೇರಳದಂತೆ ಗೇಟ್ ಗಳಿಗೆ ಬೀಗ ಹಾಕುತ್ತಿದ್ದಾರೆ ಎಂದರು.
ಜನ ತಿರಸ್ಕರಿಸಿದ್ದರೂ ವಾಮ ಮಾರ್ಗದಿಂದ ಸರಕಾರ ರಚಿಸಿರುವ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಆಡಳಿತವನ್ನು ಜಾತಿ ಕೋಮು ಆಧಾರದ ಮೇಲೆ ಆಳಲಾಗುತ್ತಿದೆ.
ರಾಜ್ಯದ ಶಾಂತಿ ಸುವ್ಯವಸ್ಥೆ ಹಾಳಾಗಿದೆ, ಮಹಿಳೆ ಮಕ್ಕಳು ಸುರಕ್ಷಿತವಾಗಿಲ್ಲ, ಅದಕ್ಕೆ ಜನ ಮುಂದಿನ ಚುನಾವಣೆಗೆ ಕಾಯುತ್ತಿದ್ದಾರೆ. ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್ ಗೆ ಅಧಿಕಾರ ಕೊಡಲು ಸಂಕಲ್ಪ ಮಾಡಿದ್ದಾರೆ ಎಂದರು.
ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ ಸಿದ್ದರಾಮಯ್ಯ ಸತೀಶ ಜಾರಕಿಹೊಳಿ ನೀಡಿದ ಹಿಂದೂ ಪದ ಹೇಳಿಕೆಗೆ ಸಂಬಂಧಿಸಿದಂತೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಪ್ರತಿಕ್ರಿಯೆ ನೀಡಿದ್ದಾರೆ ಎಂದಷ್ಟೇ ಹೇಳಿದರು.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಟಿಪ್ಪು ಜಯಂತಿ ಮಾಡೋದು ತಪ್ಪಲ್ಲ, ಆದರೆ ಸರ್ಕಾರ ಜಯಂತಿಯನ್ನು ನಿಷೇಧ ಮಾಡಿದ್ದಾರೆ. ಹೀಗಾಗಿ ಪಾಲಿಕೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ನೋಡೋಣ ಎಂದು ತಿಳಿಸಿದರು.