ಬೆಳಗಾವಿ, ೩೦- ಮೀಸಲಾತಿ ವಿಷಯದಲ್ಲಿ ಗೊಂದಲ ಸೃಷ್ಟಿಸಿ ಯಾವ ಸಮುದಾಯದವರಿಗೂ ಮೀಸಲಾತಿ ಸಿಗದಂತೆ ಮಾಡುವುದೇ ಬಿಜೆಪಿ ಸರ್ಕಾರದ ಉದ್ದೇಶ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದ್ದಾರೆ.
ರಾಜ್ಯ ಸರ್ಕಾರ ಲಿಂಗಾಯತರಿಗೆ ಮತ್ತು ಒಕ್ಕಲಿಗರಿಗೆ ಪ್ರತ್ಯೇಕ ಕೆಟಗರಿ ಸೃಷ್ಟಿ ಮಾಡಿದ ಬಗ್ಗೆ ಶುಕ್ರವಾರ ವರದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೀಸಲಾತಿ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಯಾರಿಗೂ ಮೀಸಲಾತಿ ಸಿಗಬಾರದು. ಎಲ್ಲರೂ ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡವಂತಾಗಬೇಕು ಎಂಬುದೇ ಅವರ ತಂತ್ರವಾಗಿದೆ ಎಂದರು.
ಮೀಸಲಾತಿ ಹೆಸರಿನಲ್ಲಿ ಅನಗತ್ಯ ಗೊಂದಲ ನಿರ್ಮಾಣ ಮಾಡಿದ್ದಾರೆ. ಕಾನೂನಿನಲ್ಲಿ ಈ ರೀತಿ ಮಾಡಲು ಅವಕಾಶ ಎಲ್ಲಿದೆ? ಸಮಾಜದವರು ಯಾರ್ಯಾರು ಏನೇನು ಮೀಸಲಾತಿ ಕೇಳ್ತಾರೆ ಅವರಿಗೆ ಕೊಡಬೇಕು. ಅವರು ಕೇಳಿದಷ್ಟು ಪರ್ಸೆಂಟೇಜ್ ಮೀಸಲಾತಿ ಕೊಡಬೇಕು. ಕೊನೆಗೆ ಎಲ್ಲಾ ಕೋರ್ಟ್ಗೆ ಹೋಗಿ ಲಿಟಿಗೇಷನ್ ಹಾಕಬೇಕು ಎಂಬುದು ಅವರ ಉದ್ದೇಶ ಎಂದರು.
ಮೀಸಲಾತಿ ವಿಚಾರದಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ನೇರವಾಗಿ ಬಂದು ಮಾತನಾಡಬೇಕಿತ್ತು. ಕ್ಯಾಬಿನೆಟ್ ಬಳಿಕ ಎಷ್ಟು ಪರ್ಸೆಂಟೇಜ್ ನೀಡಿದ್ದೇವೆಂದು ತಿಳಿಸಬೇಕಿತ್ತು. ಒಕ್ಕಲಿಗರು 12 ಪರ್ಸೆಂಟ್ ಮೀಸಲಾತಿ ಕೇಳುತ್ತಿದ್ದಾರೆ. ಪಂಚಮಸಾಲಿಗಳೂ ಕೇಳುತ್ತಿದ್ದಾರೆ ಎಂದರು.