ರಾಯಬಾಗ, ೮:- ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಹಿರೇಕೋಡಿ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಭೀಕರವಾಗಿ ಕೊಲೆ ಮಾಡಲಾಗಿದ್ದು ಅವರ ತುಂಡುತುಂಡಾದ ದೇಹದ ಭಾಗಗಳು ಕೊಳವೆ ಬಾವಿಯಲ್ಲಿ ಪತ್ತೆಯಾಗಿವೆ. ಅವರನ್ನು ಅಪಹರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಹೋಗಿದ್ದ ಭಕ್ತರಿಬ್ಬರು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿ ನಂತರ ಶವವನ್ನು ತುಂಡು ತುಂಡು ಮಾಡಿ ಉಪಯೋಗದಲ್ಲಿರದ ಕೊಳವೆ ಬಾವಿಯಲ್ಲಿ ಎಸೆದಿದ್ದರು.
ಜುಲೈ 5ರ ರಾತ್ರಿ ಆಶ್ರಮದ ಕೋಣೆಯಲ್ಲಿದ್ದ ಮುನಿಗಳು ಜುಲೈ 6ರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದರು. ಈ ಕುರಿತು ಭಕ್ತರು ಜೈನ ಬಸದಿಯ ಸುತ್ತಮುತ್ತ ಹುಡುಕಾಟ ನಡೆಸಿದ್ದರು. ಅವರು ಎಲ್ಲಿಯೂ ಪತ್ತೆಯಾಗದ ಕಾರಣ ಆಚಾರ್ಯ ಕಾಮಕುಮಾರ ನಂದಿ ಚಾರಿಟೇಬಲ್ ಟ್ರಸ್ಟ ಅಧ್ಯಕ್ಷ ಭೀಮಪ್ಪ ಉಗಾರೆ ಅವರು ಚಿಕ್ಕೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಕೊನೆಯ ಬಾರಿಗೆ ಭೇಟಿ ನೀಡಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾವೇ ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು.
ಆರೋಪಿಗಳಲ್ಲಿ ಒಬ್ಬ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ. ತನಗೆ ಹಣಕಾಸಿನ ಸಮಸ್ಯೆ ಇದೆ ಎಂದು ಮುನಿಗಳ ಬಳಿ ಹೇಳಿಕೊಂಡಿದ್ದ. ಸಹಾಯ ಮಾಡುವ ಸಲುವಾಗಿ ಆಶ್ರಮದ ಟ್ರಸ್ಟಿನಿಂದ ಅವನಿಗೆ ಹಣ ನೀಡಿದ್ದರು. ಈ ಹಣವನ್ನು ಮರಳಿ ಕೊಡುವಂತೆ ಮುನಿಗಳು ಪದೇ ಪದೇ ಕೇಳುತ್ತಿದ್ದರು. ಇದರಿಂದ ಬೇಸತ್ತ ಆರೋಪಿ ಕೊಲೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ಮಾಡಿ ಶವ ಎಲ್ಲಿ ಬಿಸಾಕಿದ್ದೇವೆಂದು ಸ್ಪಷ್ಟ ಮಾಹಿತಿ ನೀಡದೇ ಪೊಲೀಸರನ್ನೇ ಗೊಂದಲದಲ್ಲಿ ಸಿಲುಕಿಸುತ್ತಿದ್ದ ಆರೋಪಿಗಳು, ಶವ ಬಿಸಾಕಿರುವ ಬಗ್ಗೆ ಬೇರೆ ಬೇರೆ ಹೇಳಿಕೆ ನೀಡಿದ್ದರು. ಶವವನ್ನು ಕತ್ತರಿಸಿ ರಾಯಬಾಗ ತಾಲೂಕಿನ ಕಟಕಬಾವಿ ಗ್ರಾಮದ ಗದ್ದೆಯ ಕೊಳವೆ ಬಾವಿಯಲ್ಲಿ ಹಾಕಿದ್ದೇವೆ ಎಂದು ಒಮ್ಮೆ ಹೇಳಿದರೆ, ಮತ್ತೊಮ್ಮೆ ಶವವನ್ನು ನದಿಗೆ ಎಸೆದಿದ್ದೇವೆ ಎನ್ನುತ್ತಿದ್ದರು. ಶುಕ್ರವಾರ ರಾತ್ರಿ ಮೃತದೇಹಕ್ಕಾಗಿ ಖಟಕಬಾವಿ ಗ್ರಾಮ ಸೇರಿ ವಿವಿಧೆಡೆ ರಾತ್ರಿ ಪೊಲೀಸರಿಂದ ಶೋಧ ನಡೆದಿತ್ತು. ನಿನ್ನೆ ಮೃತದೇಹ ಪತ್ತೆಯಾಗದ ಕಾರಣ ಇಂದು ಮುಂಜಾನೆಯಿಂದ 6.30 ರಿಂದ ಪುನಃ ಹುಡುಕಾಟ ಶುರು ಮಾಡಿದ್ದರು.
ಆಶ್ರಮದಿಂದ ಅವರನ್ನು ಹೊರಗೆ ಕರೆದುಕೊಂಡು ಹೋದ ಹಂತಕರು ಅವರನ್ನು ಹತ್ಯೆ ಮಾಡಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಹಿರೇಕೋಡಿ ಗ್ರಾಮದ ಹೊರವಲಯದಲ್ಲಿ ವಿಫಲಗೊಂಡ, ಬಳಕೆಯಲ್ಲಿಲ್ಲದ ಕೊಳವೆ ಬಾವಿಯೊಂದರಲ್ಲಿ ಎಸೆದಿರುವುದಾಗಿ ತಿಳಿಸಿದ್ದರಿಂದ ಪೊಲೀಸರು ಬಾವಿಯ ಸುತ್ತಲೂ ಜೆಸಿಬಿ ಯಂತ್ರಗಳನ್ನು ಬಳಸಿ ಭೂಮಿ ಅಗೆತ ಪ್ರಾರಂಭಿಸಿ, ಶನಿವಾರ ಬೆಳಿಗ್ಗೆಯಿಂದ ಸತತ 10 ಗಂಟೆ ಕಾರ್ಯಾಚರಣೆ ಮಾಡಿದ ಪೊಲೀಸರು ಶವ ಹೊರತೆಗೆದರು.
ಮುನಿಗಳ ದೇಹವನ್ನು ಒಂಭತ್ತು ಭಾಗಗಳಲ್ಲಿ ಕತ್ತರಿಸಿ, ಸೀರೆ ಮತ್ತು ಟವೆಲ್ ನಲ್ಲಿ ಸುತ್ತಿ ಸುಮಾರು 400 ಅಡಿ ಆಳದ ಕೊಳವೆ ಬಾವಿಯಲ್ಲಿ ಎಸೆಯಲಾಗಿತ್ತು. ಕೊಳವೆ ಬಾವಿಯ 25 ಅಡಿ ಆಳದಲ್ಲಿ ಸೀರೆ ಮತ್ತು ಟವೆಲ್ ಸಿಕ್ಕಿದೆ. ದೇಹದ ತುಂಡುಗಳು 30 ಅಡಿ ಆಳದಲ್ಲಿ ಪತ್ತೆಯಾಗಿವೆ. ಆರೋಪಿಗಳು ಶವವನ್ನು ತುಂಡುತುಂಡಾಗಿ ಕತ್ತರಿಸಿ ಬಟ್ಟೆಯಲ್ಲಿ ಸುತ್ತಿ, ಚೀಲದೊಳಗೆ ಇಟ್ಟು ಕೊಳವೆಬಾವಿಯಲ್ಲಿ ಹಾಕಿದ್ದರು. ಶವದ ವಾಸನೆ ಬರದಂತೆ ಮಾಡಲು ಕೊಳವೆಬಾವಿಯಲ್ಲಿ ಮಣ್ಣು ತುರುಕಿ ಮುಚ್ಚಿದ್ದರು. ತಲೆ 2 ಭಾಗ, ಹೊಟ್ಟೆಯ 2 ಭಾಗ, ಕಾಲುಗಳು, ಕೈಗಳನ್ನು ತುಂಡು ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ಸಮಗ್ರವಾಗಿ ತನಿಖೆ ಮಾಡುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದರು.
ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಕಳೆದ 15 ವರ್ಷಗಳಿಂದ ನಂದಿ ಪರ್ವತದಲ್ಲಿ ವಾಸವಾಗಿದ್ದರು. ಕಳೆದ ಬುಧವಾರ ಜೈನಮುನಿಗಳು ತಾವು ವಾಸವಿದ್ದ ಕೋಣೆಯಲ್ಲಿ ಪಿಂಚಿ, ಕಮಂಡಲ ಹಾಗೂ ಮೊಬೈಲನ್ನು ಬಿಟ್ಟು ಕಾಣೆಯಾಗಿದ್ದರು. ಸಾಮಾನ್ಯವಾಗಿ ಜೈನಮುನಿಗಳು ಎಲ್ಲೇ ಹೋಗಬೇಕಾದರೂ ಪಿಂಚಿ, ಕಮಂಡಲ ತಗೆದುಕೊಂಡು ಹೋಗುವ ಪದ್ಧತಿ ಇದೆ. ಆದರೆ ಜೈನ ಮುನಿ ನಾಪತ್ತೆಯಾದ ದಿನ ಇವುಗಳು ಆಶ್ರಮದಲ್ಲೇ ಇದ್ದುದರಿಂದ ಭಕ್ತರ ಆತಂಕಕ್ಕೆ ಕಾರಣವಾಗಿತ್ತು.
ಮುಂಜಾಗ್ರತಾ ಕ್ರಮವಾಗಿ ಹಿರೇಕೋಡಿ ಗ್ರಾಮದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು ಸ್ವಾಮೀಜಿ ನೆನೆದು ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ.