ಬೆಂಗಳೂರು : ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದ್ದು ಈ ಮೇಲ್ ಮೂಲಕ ಈ ಬಾಂಬ್ ಬೆದರಿಕೆ ಬಂದಿದೆ. ಬೆಳಿಗ್ಗೆ ಮೇಲ್ ಚೆಕ್ ಮಾಡುವಾಗ ಇದು ಗೊತ್ತಾಗಿದೆ. ಪೊಲೀಸರು ಶಾಲೆಗಳಿಗೆ ದೌಡಾಯಿಸಿದ್ದು, ಬಾಂಬ್ ತಪಾಸಣೆ ದಳಗಳೂ ಆಗಮಿಸಿವೆ. ಎಲ್ಲಾ ಶಾಲೆಗಳಿಂದ ಮಕ್ಕಳನ್ನು ಹೊರಗೆ ಕಳುಹಿಸಲಾಗಿದೆ.
ಇ-ಮೇಲ್ ಮೂಲಕ ಅಪರಿಚಿತರು ಬೆದರಿಕೆ ಹಾಕಿದ್ದು, ಬೆಂಗಳೂರಿನ ಬಸವೇಶ್ವರ ನಗರದ 7 ಶಾಲೆಗಳಿಗೆ ಮತ್ತು ಸದಾಶಿವನಗರ, ಯಲಹಂಕ ಸೇರಿ ಹಲವು ಕಡೆಗಳಲ್ಲಿರುವ ಶಾಲೆಗೆ ಬೆದರಿಕೆ ಕರೆ ಬಂದಿದೆ ಎಂದು ಹೇಳಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕೂಡಲೇ ಮಕ್ಕಳನ್ನು ಶಾಲೆಯಿಂದ ಹೊರಗೆ ಕಳುಹಿಸಲಾಯಿತು. ಮಕ್ಕಳನ್ನು ಬಿಡಲು ಆಗಮಿಸಿದ್ದ ಪೋಷಕರು ಕೂಡ ಆತಂಕಕ್ಕೆ ಒಳಗಾದರು.
ಬೆಂಗಳೂರಿನ ಹಲವು ಶಾಲೆಗಳಿಗೆ ಬೆದರಿಕೆ ಕರೆ ಬಂದಿದೆ. ಎಲ್ಲ ಶಾಲೆಗಳಲ್ಲಿ ಬಾಂಬ್ ನಿಷ್ಕ್ರೀಯ ದಳ ಪರಿಶೀಲನೆ ನಡೆಸುತ್ತಿದೆ. ಈ ಹಿಂದೆಯೂ ಸಹ ಈ ರೀತಿ ಬೆದರಿಕೆ ಕರೆ ಬಂದಿತ್ತು. ಬಹುಶಃ ಇದು ಸುಳ್ಳು ಬಾಂಬ್ ಬೆದರಿಕೆ ಎಂದು ಅನ್ನಿಸುತ್ತಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ ತಿಳಿಸಿದ್ದಾರೆ. ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಹಿನ್ನಲೆಯಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರು ಸದಾಶಿವ ನಗರದ ನೀವ್ ಅಕಾಡಮೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.