ಬೆಂಗಳೂರು: ಗಡಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿಕೆ ವಿಚಾರವಾಗಿ ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು , ಗಡಿ ವಿವಾದ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆ ಗಮನಿಸಿದ್ದೇನೆ. ಏಕನಾಥ ಶಿಂಧೆ ಹೇಳಿಕೆ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆಯುತ್ತೇವೆ. ಮುಂದಿನ ವಾರ ಸರ್ವಪಕ್ಷ ಸಭೆ ನಡೆಯಲಿದೆ ಎಂದರು.
ಗಡಿ ವಿವಾದ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರವೇ ಸುಪ್ರೀಮ ಕೋರ್ಟನಲ್ಲಿ ದಾವೆ ಹೂಡಿದೆ. ವಾದ ಮಂಡನೆಗೆ ನಾವು ಸಮರ್ಥವಾಗಿ ತಯಾರಿ ಮಾಡಿಕೊಂಡಿದ್ದೇವೆ. ಈ ಮಧ್ಯೆ ಮಾತುಕತೆ ನಡೆಸುವ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ.
ಈ ಹಿಂದೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಸುಪ್ರೀಮ ಕೋರ್ಟನಲ್ಲಿ ವಾದ ಮಂಡಿಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಹಾಗಾಗಿ ಸದ್ಯ ನಮಗೆ ಸುಪ್ರೀಮ ಕೋರ್ಟಿನ ಮುಂದೆ ವಾದ ಮಂಡಿಸುವ ಉದ್ದೇಶವಿದೆ. ಆದರೆ ಈಗ ಮಾತುಕತೆ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಗಡಿ ವಿಚಾರವೇ ಮುಗಿದು ಹೋಗಿದೆ ಎಂದು ಹೇಳಿದರು.