ಹುಬ್ಬಳ್ಳಿ, ಜನವರಿ 16: ಬೆಳಗಾವಿಯ ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ ಗಡ್ಕರಿ ಅವರಿಗೆ ಕೊಲೆ ಬೆದರಿಕೆ ಕರೆ ಬಂದಿರುವ ಕುರಿತು ಕೂಲಂಕುಷವಾಗಿ ತನಿಖೆ ನಡೆಸಲಾಗುವುದೆಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.
ಹಿಂಡಲಗಾ ಜೈಲಿನಿಂದ ಕರೆ ಮಾಡಲಾಗಿದೆ. ನಾವು ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ. ನಾವು ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕರೆ ಮಾಡಿದ ವ್ಯಕ್ತಿಯ ಹಿನ್ನೆಲೆ ಪರಿಶೀಲನೆ ನಡೆಸುವುದಾಗಿಯೂ ಮುಖ್ಯಮಂತ್ರಿ ಹೇಳಿದ್ದಾರೆ.
ಕರೆ ಮಾಡಿದವನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಗಡಕರಿ ಅವರ ನಾಗಪುರ ಕಚೇರಿಗೆ ಬೆದರಿಕೆ ಕರೆಗಳನ್ನು ಮಾಡಿ ₹ 100 ಕೋಟಿಗೆ ಬೇಡಿಕೆ ಇಟ್ಟಿದ್ದ. ಇಲ್ಲದಿದ್ದರೆ ಬಾಂಬ್ ಸ್ಫೋಟ ಮಾಡಿ ಗಡಕರಿ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಕರೆ ಮಾಡಿದ ಎನ್ನಲಾದ ಆರೋಪಿ ಜಯೇಶ ಪೂಜಾರಿ ಎಂಬಾತ ಹಿಂಡಲಗಾ ಜೈಲಿನ ಕೈದಿಯಾಗಿದ್ದು, ಈ ಹಿಂದೆ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾನೆ. ಪೊಲೀಸರ ಪ್ರಕಾರ, ಜಯೇಶ ಪೂಜಾರಿ ತಾನು ದಾವೂದ ಇಬ್ರಾಹಿಂ ಗುಂಪಿನ ಸದಸ್ಯ ಎಂದು ಹೇಳಿಕೊಂಡಿದ್ದಾನೆ.
ಕೊಲೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಜಯೇಶ ಪೂಜಾರಿ 2016ರಲ್ಲಿ ಜೈಲಿನಿಂದ ಪರಾರಿಯಾಗಿದ್ದ. ಆದರೆ ನಂತರ ಕರ್ನಾಟಕ ಪೊಲೀಸರು ಆತನನ್ನು ಬಂಧಿಸಿದ್ದರು.
ಕೇಂದ್ರ ಸಚಿವ ನಿತಿನ ಗಡಕರಿ ಅವರ ನಾಗಪುರದ ಕಚೇರಿಗೆ ಕರೆ ಮಾಡಿದ್ದ ಆರೋಪಿ ಜಯೇಶ ಪೂಜಾರಿ ತಾನು ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಗ್ಯಾಂಗ್ನ ಸದಸ್ಯ ಎಂದು ಹೇಳಿಕೊಂಡು ಜೀವ ಬೆದರಿಕೆ ಹಾಕಿದ್ದನು. ಬಾಂಬ್ ಸ್ಫೋಟ ಮಾಡುವ ಮೂಲಕ ಗಡಕರಿ ಅವರ ಜೀವ ತೆಗೆಯುವ ಬೆದರಿಕೆ ನೀಡಿದ್ದಾನೆ. ಅಷ್ಟೇ ಅಲ್ಲದೇ 100 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾನೆ ಎಂಬ ಸತ್ಯ ವಿಚಾರಣೆಯಿಂದ ಬಯಲಾಗಿದೆ ಎಂದು ನಾಗಪುರದ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ನಾಗಪುರದಲ್ಲಿರುವ ನಿತಿನ ಗಡಕರಿ ಅವರ ಕಚೇರಿಗೆ ಶನಿವಾರ ೧೧.೨೫ ರಿಂದ ೧೨.೩೦ ರ ವೇಳೆಗೆ ಮೂರು ಬಾರಿ ಫೋನ್ ಕರೆ ಮಾಡಿ ಈ ಬೆದರಿಕೆ ಹಾಕಲಾಗಿದೆ ಎಂದು ಹಿಂದಿ ಸುದ್ದಿ ಚಾನಲ್ ಒಂದು ಪ್ರಕಟಿಸಿದೆ.