ಹುಬ್ಬಳ್ಳಿ: “ನಾ ನಾಯಕಿ” ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದ್ದು ವಿಪರ್ಯಾಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ ಗಾಂಧಿ ಅವರ ನಾ ನಾಯಕಿ ಕಾರ್ಯಕ್ರಮಕ್ಕೆ ನಮ್ಮ ವಿರೋಧವಿಲ್ಲ. ಆದರೆ ನಾ ನಾಯಕಿ ಎಂದು ಸ್ವಯಂ ಆಗಿ ಹೇಳಿಕೊಳ್ಳುವ ಸ್ಥಿತಿ ಅವರಿಗೆ ಬಂದಿದೆ. ಅವರನ್ನು ನಾಯಕಿ ಮಾಡಲು ಕರ್ನಾಟಕದ ಮಹಿಳೆಯರು ಸಿದ್ಧರಿಲ್ಲ ಎಂದು ಹೇಳಿದರು.
ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ ಗಡ್ಕರಿ ಅವರಿಗೆ ಬೆದರಿಕೆ ಕರೆ ಬಂದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕರೆಯ ಹಿಂದೆ ಯಾರಿದ್ದಾರೆ, ಹಿನ್ನೆಲೆ ಏನು ಹಾಗೂ ಯಾರು ಮಾರ್ಗದರ್ಶನ ನೀಡಿದ್ದಾರೆ ಎಂಬುದು ಮುಖ್ಯವಾಗಿದ್ದು, ಅದನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದರು.
ಯುವ ಜನೋತ್ಸವವನ್ನು, ಯುವ ವಿನಾಶೋತ್ಸವ’ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರದ್ದು ಯಥಾ ಬುದ್ಧಿ, ತಥಾ ಮಾತುಗಳು. ಅವರಿಗೆ ವಿನಾಶದ ಕನಸುಗಳು, ಅದರಲ್ಲೂ ಕಾಂಗ್ರೆಸ್ ಗೆ ವಿನಾಶದ ಕನಸುಗಳು ಬೀಳುತ್ತಿವೆ. ಎಲ್ಲದರಲ್ಲೂ ಅವರು ವಿನಾಶವನ್ನೇ ನೋಡುತ್ತಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಒಳ್ಳೆಯ ಕೆಲಸವನ್ನು ಮೆಚ್ಚುವುದು ಕಾಂಗ್ರೆಸ್ ನವರಿಗೆ ಗೊತ್ತಿಲ್ಲ. ಇತ್ತೀಚೆಗೆ ಅವರ ಭಾಷೆ, ನಡವಳಿಕೆ ಹಾಗೂ ಚಿಂತನೆ ಕೀಳುಮಟ್ಟದಿಂದ ಕೂಡಿವೆ. ದೇಶ ಹಾಗೂ ರಾಜ್ಯದ ಪ್ರಗತಿ ವಿಚಾರದಲ್ಲಿ ತೀರಾ ತಳಮಟ್ಟಕ್ಕಿಳಿಯುತ್ತಿರುವುದು, ಅವರ ಹತಾಶೆಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.