ಬೆಳಗಾವಿ : ಅಂತರ್ರಾಜ್ಯಗಳ ಗಡಿ ವಿವಾದಗಳನ್ನು ಇತ್ಯರ್ಥ ಪಡಿಸುವ ಅಧಿಕಾರ ತಮ್ಮಗೆ ಇದೆಯೋ ಇಲ್ಲವೋ ಎಂಬ ವಿಷಯದ ಕುರಿತು ನವೆಂಬರ್ 23 ರಂದು ನಿರ್ಧಾರ ಪ್ರಕಟಿಸುವದಾಗಿ ಸರ್ವೋಚ್ಚ ನ್ಯಾಯಾಲಯ ತಿಳಿಸಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರ ಸ್ಥಾಪಿಸಿರುವ ಉನ್ನತಾಧಿಕಾರ ಸಮಿತಿ ಸಭೆ ನವೆಂಬರ 21 ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಜರುಗಲಿದೆ.
ಮುಖ್ಯಮಂತ್ರಿ ಏಕನಾಥ ಶಿಂದೆ ಅಧ್ಯಕ್ಷರಾಗಿರುವ ಸಮಿತಿಗೆ ಮಹಾರಾಷ್ಟ್ರದ ಎಲ್ಲ ಪಕ್ಷಗಳ ಮುಖ್ಯಸ್ಥರು ಸದಸ್ಯರಾಗಿದ್ದು ಸಭೆಗೆ ಹಾಜರಾಗಲ್ಲಿದ್ದಾರೆ.
ಕೇಂದ್ರ ಸಚಿವ ನಾರಾಯಣ ರಾಣೆ, ಶರದ ಪವಾರ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ ಮತ್ತು ಪೃಥ್ವಿರಾಜ ಚವಾಣ, ಮಹಾರಾಷ್ಟ್ರ ಸರಕಾರದ ಸಚಿವರು, ವಿಧಾನಸಭೆ ವಿರೋಧಿ ಪಕ್ಷದ ನಾಯಕ ಅಜಿತ ಪವಾರ, ವಿಧಾನ ಪರಿಷತ್ ವಿರೋಧಿ ಪಕ್ಷದ ಮುಖ್ಯಸ್ಥ ಅಂಬಾದಾಸ ದಾವೆ ಭಾಗವಹಿಸಲಿದ್ದಾರೆ.
1956ರಲ್ಲಿ ರಾಜ್ಯಗಳು ಪುನರ್ ರಚನೆ ಸಂದರ್ಭದಲ್ಲಿ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ, ಭಾಲ್ಕಿ ಸೇರಿದಂತೆ 854 ಪಟ್ಟಣ, ಗ್ರಾಮಗಳನ್ನು ಅನ್ಯಾಯವಾಗಿ ಕರ್ನಾಟಕಕ್ಕೆ ಸೇರಿಸಲಾಗಿದೆ, ಅವುಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ಮಹಾರಾಷ್ಟ್ರ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿಯನ್ನು ನವೆಂಬರ 23, 2014 ರಂದು ಮನವಿ ಮಾಡಿಕೊಂಡಿದೆ. ವಿಪರ್ಯಾಸವೆಂದರೆ ಎಂಟು ವರ್ಷಗಳ ಬಳಿಕ ಅಂದರೇ ನವೆಂಬರ್ 23, 2022 ರಂದು ನ್ಯಾಯಾಲಯ ಪ್ರಕರಣ ತೆಗೆದುಕೊಳ್ಳುತ್ತಿದೆ.
ಇನ್ನು ಈ ಬಗ್ಗೆ ಕರ್ನಾಟಕ, ಸಂವಿಧಾನದ 3 ನೇ ವಿಧಿಯಂತೆ – ಅಂತರ ರಾಜ್ಯಗಳ ಗಡಿ ವ್ಯಾಜ್ಯ ನಿರ್ಧಾರ ತೀರ್ಮಾನ ಸರ್ವೋಚ್ಚ ನ್ಯಾಯಾಲಯದ ವ್ಯಾಪ್ತಿಗೆ ಬರಲ್ಲ, ಸಂಸತ್ತ ಮಾತ್ರ ಇದನ್ನು ನಿರ್ಧರಿಸಬಲ್ಲದು ಎಂದು ವಾಧಿಸಿದೆ. ಆದರೆ ಮಹಾರಾಷ್ಟ್ರ ಸಂವಿಧಾನದ 131ನೇ ವಿಧಿಯನ್ವಯ ಸರ್ವೋಚ್ಚ ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ವಾದಿಸಿದೆ.