ಖಾನಾಪುರ : ವಿದ್ಯುತ್ ಸಂಪರ್ಕದಿಂದ ಸುಟ್ಟು ಹೋದ ವ್ಯಕ್ತಿಯ ಅಸ್ಥಿಪಂಜರ ದೊರೆತ ಘಟನೆ ತಾಲೂಕಿನ ಲಕ್ಕೆಬೈಲ್ ಗ್ರಾಮದ ಕಬ್ಬಿನ ತೋಟವೊಂದರಲ್ಲಿ ನಡೆದಿದೆ. ಈ ಕುರಿತು ಖಾನಾಪುರ ಪೊಲೀಸರು ಹೆಸ್ಕಾಂ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಸ್ಥಳಕ್ಕೆ ತೆರಳಿ ಅಸ್ಥಿಪಂಜರದ ಪಂಚನಾಮೆ ನಡೆಸಿದ ಪೊಲೀಸರು ಅದು 26 ದಿನಗಳ ಹಿಂದೆ ಕಾಣೆಯಾಗಿದ್ದ ಲಾಕ್ಕೆಬೈಲ್ ನಿವಾಸಿ 36 ವರ್ಷದ ರಾಮಚಂದ್ರ ಅಂದಾರೆ ಎಂಬವರದೆಂದು ಗುರುತಿಸಿದ್ದಾರೆ. ಅವರ ಅಸ್ಥಿಪಂಜರದ ಮೇಲೆ ಕಂಬದಿಂದ ಕಟ್ ಆಗಿ ಬಿದ್ದಿದ್ದ ವಿದ್ಯುತ್ ತಂತಿ ಕಂಡು ವಿದ್ಯುತ್ ಹರಿದು ದೇಹ ಸುಟ್ಟು ಹೋಗಿದೆ ಎಂದು ಖಾನಾಪುರ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿರುದ್ಧ IPC ಸೆಕ್ಷನ್ 306 ರ ಅನ್ವಯ ದೂರು ದಾಖಲಿಸಿಕೊಂಡಿದ್ದಾರೆ.
ರಾಮಚಂದ್ರ ಅಂದಾರೆ ಅವರು ಕಾಣೆಯಾಗಿರುವ ಕುರಿತು ಕುಟುಂಬಸ್ಥರು 26 ದಿನಗಳ ಹಿಂದೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಲಕ್ಕೆಬೈಲ್ ಸೇರಿದಂತೆ ಅನೇಕ ಗ್ರಾಮಗಳಲ್ಲಿ ವಿದ್ಯುತ್ ತಂತಿಗಳು ಕಂಬದಿಂದ ಕಿತ್ತು ಬಿದ್ದಿರುವ ಕುರಿತು ಗ್ರಾಮಸ್ಥರು ಹೆಸ್ಕಾಂಗೆ ಅನೇಕ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸದೇ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.