ಬೆಳಗಾವಿ, 25: ಬೆಳಗಾವಿ ದಂಡು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆನಂದ ಅವರು ಕ್ಯಾಂಪ್ ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ತಮಿಳುನಾಡು ಮೂಲದವರಾದ 40 ವರುಷದ ಆನಂದ ಅವರು ಶುಕ್ರವಾರ ಮನೆಯಿಂದ ಹೊರಗೆ ಬಂದಿರಲಿಲ್ಲ. ಶನಿವಾರ ಕೂಡ ಅವರು ಮನೆಯ ಬಾಗಿಲು ತೆರೆಯದ್ದರಿಂದ ಮನೆಯ ಸೇವಕರು ಕ್ಯಾಂಪ್ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದರು. ಪೊಲೀಸರು ಬಾಗಿಲು ತೆರೆಯಲು ಮಾಡಿದ ಯತ್ನಕ್ಕೆ ಸ್ಪಂದನೆ ದೊರೆಯದ್ದರಿಂದ ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ ಆನಂದ ಅವರು ಶವವಾಗಿ ಪತ್ತೆಯಾಗಿದ್ದಾರೆ.
“ಕಳೆದ ಗುರುವಾರದಿಂದ ಅವರು ಕಚೇರಿಗೂ ಬಂದಿರಲಿಲ್ಲ, ಅಲ್ಲದೇ ಅಂದಿನಿಂದ ಅವರು ಯಾರಿಗೂ ಕಂಡು ಬಂದಿರಲಿಲ್ಲ. ಮೊಬೈಲ್ ಕರೆಗಳನ್ನೂ ಸ್ವೀಕರಿಸಿರಲಿಲ್ಲ” ಎಂದು ಅವರ ಕಚೇರಿ ಮೂಲಗಳು ಸಮದರ್ಶಿಗೆ ತಿಳಿಸಿವೆ.
ಇಂಡಿಯನ್ ಡಿಫೆನ್ಸ ಎಸ್ಟೇಟ ಸರ್ವಿಸಸ್ ಮೂಲಕ ಕೇಂದ್ರ ಸರಕಾರದ ಅಧಿಕಾರಿಯಾಗಿದ್ದ ಆನಂದ ಅವರು ಕಳೆದ ಒಂದೂವರೇ ವರ್ಷಗಳಿಂದ ಬೆಳಗಾವಿ ದಂಡು ಮಂಡಳಿಯ ಮುಖ್ಯ ಅಧಿಕಾರಿಯಾಗಿದ್ದರು.
ದಂಡು ಮಂಡಳಿಯಲ್ಲಿ ಇತ್ತೀಚಿಗೆ ಮಾಡಿಕೊಂಡ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು ತನಿಖೆ ಮಾಡಬೇಕೆಂದು ವ್ಯಕ್ತಿಯೊಬ್ಬರು ಸಲ್ಲಿಸಿದ್ದ ದೂರಿಗೆ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ದಾಳಿ ನಡೆಸಿ ಪರಿಶೀಲಿಸಿತ್ತು ಎಂಬುವದನ್ನು ಇಲ್ಲಿ ಸ್ಮರಿಸಬಹುದು.