ಬೀದರ : ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಗುಂಪೊಂದು ೧೪೬೦ರಲ್ಲಿ ನಿರ್ಮಿಸಲಾಗಿರುವ ಪಾರಂಪರಿಕ ಮದರಸಾವೊಂದಕ್ಕೆ ನುಗ್ಗಿ ದುರ್ಗಾ ಪೂಜೆ ಮಾಡಿದ ಘಟನೆ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಈ ಸಂಬಂಧ ಒಂಭತ್ತು ಜನರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಮಾತ್ರ ಬಂಧಿಸಲಾಗಿದೆ. ಬೀದರನ ಹಲವಾರು ಮುಸ್ಲಿಂ ಸಂಘಟನೆಗಳು ಘಟನೆಯನ್ನು ಖಂಡಿಸಿವೆ. ಎಲ್ಲರನ್ನೂ ಬಂಧಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಮುಸ್ಲಿಂ ಸಂಘಟನೆಗಳು ಬೆದರಿಕೆ ಹಾಕಿವೆ.
1460 ರ ದಶಕದಲ್ಲಿ ನಿರ್ಮಿಸಲಾದ ಬೀದರನಲ್ಲಿರುವ ಮಹಮುದ ಗವಾನ್ ಮದರಸಾ ಭಾರತೀಯ ಪುರಾತತ್ವ ಸಮೀಕ್ಷೆಯ ಅಡಿಯಲ್ಲಿ ಗೊತ್ತುಪಡಿಸಿದ ಪಾರಂಪರಿಕ ತಾಣವಾಗಿದೆ. ಈ ರಚನೆಯನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕಗಳಲ್ಲಿ ಪಟ್ಟಿ ಮಾಡಲಾಗಿದೆ.
ಪೂಜೆ ಮಾಡಲು ಒಳಗೆ ಈ ಗುಂಪು ಮದರಸಾದ ಬೀಗ ಒಡೆದು ಒಳಗೆ ನುಗ್ಗಿದೆ. ಇದಕ್ಕೂ ಮುನ್ನ ಮದರಸಾದ ಮೆಟ್ಟಿಲುಗಳ ಮೇಲೆ ನಿಂತು ಅವರು “ಹಿಂದೂ ಧರ್ಮ ಕೀ ಜೈ” ಘೋಷಣೆಗಳನ್ನು ಕೂಗಿದ್ದಾರೆ. ಇದರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.



